ಭಾರತ-ಚೀನಾ ಗಡಿಯ ಸಮೀಪ ಉತ್ತರ ಸಿಕ್ಕಿಂನಲ್ಲಿ ಭಾರತೀಯ ಸೇನಾ ವಾಹನ ಸುಮಾರು 700 ರಿಂದ 800 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು ಘಟನೆಯಲ್ಲಿ 4 ಯೋಧರು ಹುತಾತ್ಮರಾಗಿದ್ದಾರೆ. ಸೇನಾ ಟ್ರಕ್ ಪಶ್ಚಿಮ ಬಂಗಾಳದ ಪೆಡಾಂಗ್‌ನಿಂದ ಸಿಲ್ಕ್ ರೂಟ್ ಮೂಲಕ ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯ ಜುಲುಕ್‌ಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸಿಕ್ಕಿಂನ ರೆನಾಕ್ ರೋಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್‌ಚಂದ್ ದಾರಾ ಬಳಿ ಈ ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸೇನಾ ಅಧಿಕಾರಿಗಳು ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಈ ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಾಗಿದೆ. ಮೃತರನ್ನು ಮಧ್ಯಪ್ರದೇಶದ ಚಾಲಕ ಪ್ರದೀಪ್ ಪಟೇಲ್, ಡಬ್ಲ್ಯೂ. ಪೀಟರ್, ಗುರ್ಸೇವ್ ಸಿಂಗ್ ಮತ್ತು ತಮಿಳುನಾಡಿನ ಸುಬೇದಾರ್ ಕೆ. ತಂಗಪಾಂಡಿ ಎಂದು ತಿಳಿದುಬಂದಿದೆ. ಚಾಲಕ ಸೇರಿದಂತೆ ಮೃತರೆಲ್ಲರೂ ಪಶ್ಚಿಮ ಬಂಗಾಳದ ಬಿನಾಗುರಿಯಲ್ಲಿರುವ ಘಟಕದ ಸೇನಾ ಸಿಬ್ಬಂದಿ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷವೂ ಲಡಾಖ್‌ನಲ್ಲಿ ಇಂತಹದ್ದೇ ಭೀಕರ ಅಪಘಾತ ಸಂಭವಿಸಿತ್ತು. ಆಗಸ್ಟ್‌ನಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿತ್ತು. ಲೇಹ್ ಸಮೀಪದ ಕ್ಯಾರಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಇಲ್ಲಿ ಸೇನಾ ವಾಹನ ಹಳ್ಳಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ ಒಂಬತ್ತು ಯೋಧರು ಪ್ರಾಣ ಕಳೆದುಕೊಂಡಿದ್ದರು.