ನವದೆಹಲಿ: ಒಲಿಂಪಿಕ್ ಕುಸ್ತಿ ಪಟು ಬಜರಂಗ್ ಪುನಿಯಾ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರಿಗೆ ಬೆದರಿಕೆ ಸಂದೇಶಗಳು ಬರಲಾರಂಭಿಸಿವೆ.
ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿರುವುದಾಗಿ ಬಜರಂಗ್ ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪುನಿಯಾ ಅವರಿಂದ ದೂರನ್ನು ಸ್ವೀಕರಿಸಿದ್ದು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ತೊರೆಯುವಂತೆ ಅಥವಾ ಭೀಕರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂಬ ಬೆದರಿಕೆ ಸಂದೇಶದಲ್ಲಿ ಪುನಿಯಾ ಅವರಿಗೆ ಬಂದಿದೆ ಎಂದು ವರದಿಗಳು ಹೇಳುತ್ತಿವೆ.
ಒಲಿಂಪಿಯನ್‌ಗಳಾದ ಪುನಿಯಾ ಮತ್ತು ವಿನೇಶ್ ಫೋಗಟ್ ಶುಕ್ರವಾರ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಜೂಲಾನಾ ಕ್ಷೇತ್ರದಿಂದ ಫೋಗಟ್ ಅವರನ್ನು ಕಣಕ್ಕಿಳಿಸಿದ್ದರೆ, ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪೂನಿಯಾ ಕಂಚಿನ ಪದಕ ಗೆದ್ದಿದ್ದರು.