ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ಪೀಪಲ್ಸ್ ಲಿಬರೇಷನ್ ಆರ್ಮಿ ಒಳನುಸುಳಿರುವ ಸುದ್ದಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದು ಇನ್ನೂ ನಿರ್ಣಯವಾಗದ ಪ್ರದೇಶಗಳಿಗೆ ಗುರುತು ಹಾಕಿದಾಕ್ಷಣ ಆ ಜಾಗ ಒತ್ತುವರಿಯಾಗಿದೆ ಎಂದರ್ಥವಲ್ಲ ಎಂದು ಹೇಳಿದರು.
ಚೀನಾ-ಭಾರತದ ಗಡಿಯಲ್ಲಿನ ಅನಿರ್ದಿಷ್ಟ ಪ್ರದೇಶಗಳಲ್ಲಿ ಗಸ್ತು ತಿರುಗುವಾಗ ಭಾರತ ಮತ್ತು ಚೀನಾದ ಸೇನೆಗಳು ಕೆಲವೊಮ್ಮೆ ಪರಸ್ಪರ ಮುಖಾಮುಖಿಯಾಗುತ್ತವೆ. ಆದರೆ ಇದು ಭಾರತದ ಭೂಪ್ರದೇಶದ ಮೇಲೆ ಅತಿಕ್ರಮಣಕ್ಕೆ ಕಾರಣವಾಗುವುದಿಲ್ಲ ಎಂದು ಪಶ್ಚಿಮ ಅರುಣಾಚಲ ಪ್ರದೇಶದ ಸಂಸದ ರಿಜಿಜು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಚೀನಾ ಸೇನೆಯು ಕಳೆದ ವಾರ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದೆ. ಅಲ್ಲದೆ ಕಪಾಪು ಪ್ರದೇಶದಲ್ಲಿ ಬೀಡುಬಿಟ್ಟಿದೆ ಎಂದು ಹೇಳಲಾದ ಮಾಧ್ಯಮ ವರದಿಗಳ ಕುರಿತಂತೆ ಕೇಂದ್ರ ಸಚಿವ ರಿಜಿಜು ಪ್ರತಿಕ್ರಿಯಿಸಿದ್ದಾರೆ. ಈ ಪ್ರದೇಶದಲ್ಲಿನ ಬಂಡೆಗಳ ಮೇಲೆ ವರ್ಣಚಿತ್ರಗಳು ಮತ್ತು ಚೈನೀಸ್ ಆಹಾರ ಪದಾರ್ಥಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಈ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಜಿಜು, ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಿರ್ಣಯವಾಗದ ಪ್ರದೇಶಗಳಲ್ಲಿ ಗಸ್ತು ಅತಿಕ್ರಮಿಸಲಾಗುತ್ತಿದೆ. ಚೀನಾ ಸೇನೆಗೆ ಅಲ್ಲಿ ಯಾವುದೇ ಶಾಶ್ವತ ವ್ಯವಸ್ಥೆ ನಿರ್ಮಾಣ ಮಾಡಲು ಅವಕಾಶವಿಲ್ಲ. ಭಾರತದ ಕಡೆಯಿಂದ ಕಟ್ಟುನಿಟ್ಟಿನ ನಿಗಾ ಇದೆ. ಕೇವಲ ನಿರ್ಣಯಿಸದ ಪ್ರದೇಶಗಳನ್ನು ಗುರುತಿಸುವುದರಿಂದ ಆ ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರ್ಥವಲ್ಲ ಎಂದರು.
ಗಡಿಯಲ್ಲಿ ಭಾರತ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದು ಅದು ಮುಂದುವರಿಯುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಆದರೆ ನಾವು ಯಾರನ್ನೂ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಳಿ ಬರಲು ಬಿಡುವುದಿಲ್ಲ ಎಂದರು.