ಕೋಲ್ಕತ್ತಾ: ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಧಿಕ್ಕರಿಸಿದ ಧರಣಿ ನಿರತ ಕಿರಿಯ ವೈದ್ಯರು, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮತ್ತು ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ, ಕೊಲೆ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.
ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು ಮತ್ತು ಕೆಲಸ ಪುನರಾರಂಭಿಸಿದ ನಂತರ ಅವರ ವಿರುದ್ಧ ಯಾವುದೇ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತು.
ಪ್ರತಿಭಟನಾನಿರತ ವೈದ್ಯರ ವಿರುದ್ಧ ಶಿಕ್ಷಾರ್ಹ ವರ್ಗಾವಣೆ ಸೇರಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಭರವಸೆ ನೀಡಿದ ನಂತರ ನ್ಯಾಯಾಲಯವು ಈ ನಿರ್ದೇಶನ ನೀಡಿದೆ.
“ನಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕೋಲ್ಕತ್ತಾ ಪೊಲೀಸ್ ಆಯುಕ್ತರು, ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಸಂಜೆ 5 ಗಂಟೆಯೊಳಗೆ ತೆಗೆದುಹಾಕುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಈ ಸಂಬಂಧ ನಾವು ಚರ್ಚೆಗೆ ಮುಕ್ತರಾಗಿದ್ದೇವೆ" ಎಂದು ಪ್ರತಿಭಟನಾನಿರತ ವೈದ್ಯರಲ್ಲಿ ಒಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಸ್ನಾತಕೋತ್ತರ ವೈದ್ಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ವೈದ್ಯೆಯ ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಕಿರಿಯ ವೈದ್ಯರು ಆಗಸ್ಟ್ 9 ರಂದು ತಮ್ಮ ಪ್ರತಿಭಟನೆ ಪ್ರಾರಂಭಿಸಿದ್ದರು.