ಕೋಲ್ಕತ್ತಾ: ಆರ್‌ಜಿ ಕರ್ ಆಸ್ಪತ್ರೆ ಬಿಕ್ಕಟ್ಟನ್ನು ಪರಿಹರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದೇವೆ ಎಂದು ಧರಣಿ ನಿರತ ವೈದ್ಯರು ಸೋಮವಾರ ಸಂಜೆ ಖಚಿತಪಡಿಸಿದ್ದಾರೆ. ಆದರೆ ಮಾತುಕತೆಯ ವಿವರಗಳನ್ನು ದಾಖಲಿಸಲು ಮತ್ತು ಸಹಿ ಹಾಕಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಸಭೆಯ ವಿವರ ದಾಖಲಿಸಬೇಕು ಎಂಬ ಷರತ್ತನ್ನು ಸುಲಭವಾಗಿ ಒಪ್ಪಿಕೊಂಡಿದ್ದು, ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಸಭೆಯ ವಿವರಗಳ ಪ್ರತಿಗೆ ಎರಡೂ ಕಡೆಯವರು ಸಹಿ ಹಾಕುತ್ತಾರೆ ಮತ್ತು ಸ್ಪಷ್ಟತೆಗಾಗಿ ಪ್ರತಿಗಳನ್ನು ಪ್ರತಿಯೊಬ್ಬರಿಗೂ ಹಂಚಲಾಗುವುದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಪಂತ್ ಅವರು ಮಾತುಕತೆಗೆ ಆಹ್ವಾನಿಸುವ ಮೇಲ್‌ಗೆ ಪ್ರತಿಕ್ರಿಯಿಸಿದ ಧರಣಿ ನಿರತ ವೈದ್ಯರು, ಸಭೆಯಲ್ಲಿ ಭಾಗವಹಿಸಲು ಮತ್ತು ಮುಖ್ಯಮಂತ್ರಿಗಳ ಮುಂದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದರು.
"ದೇಶದ ಕಾನೂನು ಪಾಲಿಸುವ ನಾಗರಿಕರಾಗಿ, ನಾವು ಸಭೆಗೆ ಹಾಜರಾಗಲು ಸಿದ್ಧರಿದ್ದೇವೆ. ಆದರೆ ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಸಭೆಯ ಸ್ಥಳವು ಅಧಿಕೃತ ಮತ್ತು ಆಡಳಿತಾತ್ಮಕ ಸ್ಥಳವಾಗಿದ್ದರೆ ಅದು ನಿಜವಾಗಿಯೂ ಪ್ರಶಂಸನೀಯವಾಗಿದೆ ಎಂದು ವೈದ್ಯರು ಹೇಳಿರುವುದಾಗಿ ತಿಳಿಸಿದ್ದರು.
ಆರ್‌ಜಿ ಕರ್ ಅತ್ಯಾಚಾರ ಪ್ರಕರಣದಲ್ಲಿ ತಾಲಾ ಪೊಲೀಸ್ ಠಾಣೆಯ ಒಸಿಯನ್ನು ಸಿಬಿಐ ಬಂಧಿಸಿರುವುದು ಸಭೆಯ ಪಾರದರ್ಶಕತೆಯ ಮಹತ್ವವನ್ನು ಮೊದಲಿಗಿಂತ ಹೆಚ್ಚು ಹೆಚ್ಚಿಸುತ್ತದೆ ಎಂದು ವೈದ್ಯರು ಉಲ್ಲೇಖಿಸಿದ್ದಾರೆ.
"ಎರಡೂ ಕಡೆಯವರು ಪ್ರತ್ಯೇಕ ವೀಡಿಯೊಗ್ರಾಫರ್‌ಗಳಿಂದ ಸಭೆಯನ್ನು ವೀಡಿಯೊಗ್ರಾಫ್ ಮಾಡಬೇಕು ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ. ನಿಮ್ಮ ಕಡೆಯಿಂದ ಸಾಧ್ಯವಾಗದಿದ್ದರೆ, ಸಭೆಯ ಸಂಪೂರ್ಣ ವಿಡಿಯೋ ಫೈಲ್ ಅನ್ನು ವೈದ್ಯರ ಪ್ರತಿನಿಧಿಗಳಿಗೆ ಹಸ್ತಾಂತರಿಸಿ.
ಅದು ಸಾಧ್ಯವಾಗದಿದ್ದರೆ, ಸಭೆಯ ಪೂರ್ಣ ವಿವರಗಳನ್ನು ಎರಡೂ ಕಡೆಯವರು ದಾಖಲಿಸಬೇಕು ಮತ್ತು ಹಾಜರಿದ್ದ ಎಲ್ಲರೂ ಸಹಿ ಮಾಡಿ ಸಭೆಯ ಕೊನೆಯಲ್ಲಿ ಅದನ್ನು ಹಸ್ತಾಂತರಿಸಬೇಕು” ಎಂದು ಧರಣಿ ನಿರತ ವೈದ್ಯರು ಹೇಳಿದ್ದಾರೆ.
ಕೂಡಲೇ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ, ‘‘ಸಭೆಯ ನಡಾವಳಿಗೆ ಎರಡೂ ಕಡೆಯವರು ಸಹಿ ಹಾಕಲಿದ್ದು, ಸ್ಪಷ್ಟತೆಗಾಗಿ ಪ್ರತಿಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಹಂಚಲಾಗುವುದು’’ ಎಂದು ಹೇಳಿದ್ದಾರೆ.
ಈ ಮುಂಚೆ ಸಿಎಂ ಜೊತೆಗಿನ ಸಭೆಯನ್ನು ಲೈವ್-ಸ್ಟ್ರೀಮಿಂಗ್ ಮಾಡಬೇಕು ಎಂದು ಕಿರಿಯ ವೈದ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಎರಡು ದಿನಗಳ ನಂತರ, ಐದನೇ "ಐದನೇ ಮತ್ತು ಕೊನೆಯ ಬಾರಿ" ಆರ್‌ಜಿ ಕರ್ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರತಿಭಟನಾನಿರತ ಕಿರಿಯ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಲಾಗಿತ್ತು.