ಕೋಲ್ಕತ್ತ: ಆರ್ ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಸಿಎಂ ಜೊತೆ ನಡೆಸಿದ ಸಭೆ ಅಂತ್ಯಗೊಂಡಿದ್ದು, ಸಿಎಂ ಪ್ರತಿಭಟನಾ ನಿರತ ವೈದ್ಯರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಹಾಗೂ ಡೆಪ್ಯುಟಿ ಕಮಿಷನರ್ (ಉತ್ತರ) ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂಬುದು ಪ್ರತಿಭಟನಾ ನಿರತ ವೈದ್ಯರ ಪ್ರಮುಖ ಬೇಡಿಕೆಯಾಗಿತ್ತು.
ಮಂಗಳವಾರ ಸಂಜೆ 4 ಗಂಟೆಯ ನಂತರ ಹೊಸ ಕೋಲ್ಕತ್ತಾ ಪೊಲೀಸ್ ಆಯುಕ್ತರ ಹೆಸರನ್ನು ಪ್ರಕಟಿಸಲಾಗುವುದು ಎಂದು ಸಿಎಂ ಹೇಳಿದ್ದು, ವೈದ್ಯಕೀಯ ಶಿಕ್ಷಣ ನಿರ್ದೇಶಕರು ಮತ್ತು ಆರೋಗ್ಯ ಸೇವಾ ನಿರ್ದೇಶಕರನ್ನು ಪದಚ್ಯುತಗೊಳಿಸುವುದಾಗಿ ಸಿಎಂ ವೈದ್ಯರೊಂದಿಗಿನ ಸಭೆಯ ಬಳಿಕ ಘೋಷಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಪ್ರತಿಭಟನಾ ನಿರತ ಕಿರಿಯ ವೈದ್ಯರೊಂದಿಗಿನ ಮಾತುಕತೆಗಳು 'ಫಲಪ್ರದ'ವಾಗಿದ್ದು, ಸುಮಾರು '99 ಶೇಕಡಾ' ಬೇಡಿಕೆಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು.
ಸಭೆ ಸಕಾರಾತ್ಮಕವಾಗಿತ್ತು. ಪ್ರತಿಭಟನಾ ನಿರತ ವೈದ್ಯರೂ ಸಹ ಇದನ್ನು ಒಪ್ಪುತ್ತಾರೆ ಎಂದು ಭಾವಿಸುತ್ತೇನೆ. ಹಾಗಿಲ್ಲದೇ ಇದ್ದಲ್ಲಿ ಸಭೆಯ ವಿವರಗಳಿಗೆ ನಾವಿಬ್ಬರೂ ಏಕೆ ಸಹಿ ಹಾಕುತ್ತಿದ್ದೆವು? ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
"ನಾವು ಅವರ ಹೆಚ್ಚಿನ ಬೇಡಿಕೆಗಳನ್ನು ಸ್ವೀಕರಿಸಿದ್ದೇವೆ, ಏಕೆಂದರೆ ಅವರು ಚಿಕ್ಕವರಾಗಿದ್ದಾರೆ. ಅವರು ಹೋಗಿ ಚರ್ಚಿಸಿ ನಂತರ ಪ್ರತಿಭಟನೆಯನ್ನು ಹಿಂಪಡೆಯುವ ಬಗ್ಗೆ ನಿರ್ಧರಿಸುತ್ತಾರೆ ಎಂದು ಅವರು ಹೇಳುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ ರೋಗಿಗಳ ಸ್ಥಿತಿಯನ್ನು ಉಲ್ಲೇಖಿಸಿ, ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ನಾನು ಪ್ರತಿಭಟನೆ ವಾಪಸ್ ಪಡೆಯುವಂತೆ ಅವರಿಗೆ ಮನವಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ವೈದ್ಯರ ಬಹುತೇಕ ಬೇಡಿಕೆಗಳನ್ನು ಸ್ವೀಕರಿಸಿರುವುದರಿಂದ, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.
ಆದರೆ, ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ನೀಡಿದ ಭರವಸೆ ಈಡೇರುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದರು. ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರನ್ನು ವಜಾಗೊಳಿಸಿರುವುದು ನಮ್ಮ ನೈತಿಕ ವಿಜಯವಾಗಿದೆ ಎಂದು ವೈದ್ಯರು ಸಭೆಯ ನಂತರ ಹೇಳಿದರು.