ಜಮ್ಮು-ಕಾಶ್ಮೀರ 
ದೇಶ

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: 2ನೇ ಹಂತದ ಮತದಾನ ಆರಂಭ, ಪ್ರಜಾಪ್ರಭುತ್ವ ಬಲಪಡಿಸುವಂತೆ ಪ್ರಧಾನಿ ಮೋದಿ ಮನವಿ

ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಜಿಲ್ಲೆಗಳ 26 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಆರಂಭವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಜಿಲ್ಲೆಗಳ 26 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿ ನಾಯಕ ಒಮರ್ ಅಬ್ದುಲ್ಲಾ, ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಮುಖ್ಯಸ್ಥ ರವೀಂದರ್ ರೈನಾ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಸೇರಿದಂತೆ ಹಲವು ಘಟಾನುಘಟಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಮರ್ ಅಬ್ದುಲ್ಲಾ ಗಂದರ್‌ಬಾಲ್ ಮತ್ತು ಬುದ್ಗಾಮ್ ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿದ್ದು, ಸೆಂಟ್ರಲ್ ಶಾಲ್ತೆಂಗ್ ಕ್ಷೇತ್ರದಲ್ಲಿ ಹಮೀದ್ ಕರ್ರಾ ಮತ್ತು ನೌಶೆರಾದಲ್ಲಿ ರವೀಂದರ್ ರೈನಾ ಸ್ಪರ್ಧಿಸುತ್ತಿದ್ದಾರೆ. ಈ ಹಂತದಲ್ಲಿ 25.78 ಲಕ್ಷ ಮತದಾರರು 239 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಒಟ್ಟು 3,502 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇವುಗಳಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಮತ್ತು 2,446 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಪಾರದರ್ಶಕ ಚುನಾವಣೆಗಾಗಿ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಚುನಾವಣೆಯಲ್ಲಿ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ನಾಯಕ ಸರ್ಜನ್ ಅಹ್ಮದ್ ವೇಜ್ ಅಲಿಯಾಸ್ ಬರ್ಕತಿ ಬೀರವಾ ಮತ್ತು ಗಂದರ್‌ಬಲ್‌ ಎರಡೂ ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿರುವುದು ವಿಶೇಷವಾಗಿದೆ.

ಶ್ರೀನಗರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 93 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬುದ್ಗಾಮ್ ಜಿಲ್ಲೆಯ 5 ಸ್ಥಾನಗಳಲ್ಲಿ 46 ಅಭ್ಯರ್ಥಿಗಳು ಮತ್ತು ರಾಜೌರಿ ಜಿಲ್ಲೆಯ ಐದು ಸ್ಥಾನಗಳಲ್ಲಿ 34 ಅಭ್ಯರ್ಥಿಗಳಿದ್ದಾರೆ. ಪೂಂಚ್ ಜಿಲ್ಲೆಯ ಮೂರು ಸ್ಥಾನಗಳಿಗೆ 25 ಅಭ್ಯರ್ಥಿಗಳು, ಗಂದರ್ಬಾಲ್ ಜಿಲ್ಲೆಯ ಎರಡು ಸ್ಥಾನಗಳಿಗೆ 21 ಅಭ್ಯರ್ಥಿಗಳು ಮತ್ತು ರಿಯಾಸಿ ಜಿಲ್ಲೆಯ ಮೂರು ಸ್ಥಾನಗಳಿಗೆ 20 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಸೆಪ್ಟಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ 24 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.61.38ರಷ್ಟು ಮತದಾನವಾಗಿತ್ತು. ಉಳಿದ 40 ವಿಧಾನಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

ಪ್ರಜಾಪ್ರಭುತ್ವ ಬಲಪಡಿಸಿ: ಪ್ರಧಾನಿ ಮೋದಿ

ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರೂ ಮತಹಕ್ಕು ಚಲಾಯಿಸುವ ಪ್ರಜಾಪ್ರಭುತ್ವವನ್ನು ಬಲಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ತಮ್ಮ ಪ್ರಮುಖ ಪಾತ್ರವನ್ನು ವಹಿಸುವಂತೆ ನಾನು ಮನವಿ ಮಾಡುತ್ತೇನೆ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಮತ ಹಾಕಲು ಹೊರಟಿರುವ ಎಲ್ಲಾ ಯುವಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT