ನವದೆಹಲಿ: ಸುಪ್ರೀಂ ಕೋರ್ಟ್ ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ವಾಯು ಗುಣಮಟ್ಟ ನಿರ್ವಹಣೆ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ವಾಯು ಮಾಲಿನ್ಯ ತಡೆಗಟ್ಟುವುದಕ್ಕೆ ಹಾಗೂ ಕೃಷಿ ತ್ಯಾಜ್ಯ ಸುಡುವುದನ್ನು ತಪ್ಪಿಸುವುದರಲ್ಲಿ ವಿಫಲರಾಗಿರುವುದಕ್ಕೆ ವಾಯು ಗುಣಮಟ್ಟ ಸಮಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಭಾ ಎಸ್ ಓಕಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ವಾಯು ಗುಣಮಟ್ಟದ ಸಮಿತಿಯು ಅದರ ಕಾರ್ಯವಿಧಾನದಲ್ಲಿ ಹೆಚ್ಚು ಸಕ್ರಿಯವಾಗಿರಬೇಕು ಎಂದು ಹೇಳಿದೆ. ತಳಮಟ್ಟದಲ್ಲಿ ತ್ಯಾಜ್ಯ ಸುಡುವಿಕೆಗೆ ಪರ್ಯಾಯ ಕ್ರಮಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚು ಸಮಗ್ರ ಅನುಸರಣೆ ವರದಿಯನ್ನು ಸಲ್ಲಿಸಲು ಸಿಎಕ್ಯೂಎಂಗೆ ನಿರ್ದೇಶಿಸಿದ ಪೀಠ, ಪರಿಣಾಮಕಾರಿ ಕ್ರಮದ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿತು. “ಕೃಷಿ ತ್ಯಾಜ್ಯ ಸುಡುವ ಸಮಸ್ಯೆಯನ್ನು ನಿಭಾಯಿಸಲು ಒಂದೇ ಒಂದು ಸಮಿತಿಯನ್ನು ರಚಿಸಲಾಗಿಲ್ಲ. ಪ್ರತಿ ವರ್ಷ, CAQM ಕಾಯಿದೆ ಸಂಪೂರ್ಣ ಅನುಸರಣೆಯಾಗದೇ ಇರುವುದನ್ನು ಸೂಚಿಸುವ, ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಾವು ನೋಡುತ್ತೇವೆ. ಯಾವುದಾದರೂ ಸಮಿತಿಗಳನ್ನು ರಚಿಸಲಾಗಿದೆಯೇ? ಒಂದು ಹೆಜ್ಜೆ ಇಟ್ಟಿರುವುದನ್ನು ನಮಗೆ ತೋರಿಸಿ. ಕಾಯಿದೆಯ ಅಡಿಯಲ್ಲಿ ನೀವು ಯಾವ ನಿರ್ದೇಶನಗಳನ್ನು ಬಳಸಿದ್ದೀರಿ? ನೀವು ಕೇವಲ ಮೂಕ ಪ್ರೇಕ್ಷಕರಾಗಿದ್ದೀರಿ ಎಂದು ನ್ಯಾಯಾಲಯ ಹೇಳಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಮೂರು ಉಪಸಮಿತಿಗಳು ಒಂದು ಸಭೆಯನ್ನು ಕರೆಯುತ್ತಿವೆ ಎಂದು CAQM ನ ಅಧ್ಯಕ್ಷರು ಪ್ರತಿಕ್ರಿಯಿಸಿದರು. "ಇಂತಹ ಅಪರೂಪದ ಸಭೆಗಳ ಮೂಲಕ ಅವರು ತಮ್ಮ ಕಾರ್ಯಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ? ಎಂದು ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ನ್ಯಾಯಾಲಯದ ಅವಲೋಕನಗಳು ವಾಯು ಮಾಲಿನ್ಯವನ್ನು ಎದುರಿಸಲು ಮತ್ತು ಪ್ರದೇಶದಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಲು ನಿರ್ಣಾಯಕ ಕ್ರಮದ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.