ನವದೆಹಲಿ: ಬೆಂಗಳೂರು ಕೋರ್ಟ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಆದೇಶ ನೀಡಿರುವ ಬಗ್ಗೆ ಇಂಡಿ ಮೈತ್ರಿಕೂಟದ ನಾಯಕಿ ಸುಪ್ರಿಯಾ ಸುಳೆ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪದ ಅಡಿ ನಿರ್ಮಲಾ ಸೀತಾರಾಮನ್ ಹಾಗೂ ಇನ್ನಿತರರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿತ್ತು.
ಈ ವಿಷಯವಾಗಿ ಸರ್ಕಾರಕ್ಕೆ ನೇರ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಎನ್ ಸಿಪಿ (ಶರದ್ ಪವಾರ್ ಬಣ)ದ ಸಂಸದೆಯಾಗಿರುವ ಸುಪ್ರಿಯಾ ಸುಳೆ ಹೇಳಿದ್ದಾರೆ. ಎಎನ್ಐ ಜೊತೆ ಮಾತನಾಡಿರುವ ಸುಳೆ, ಇದು ನನಗೆ ತುಂಬಾ ನೋವಿನ ಮತ್ತು ಆಘಾತಕಾರಿಯಾಗಿದೆ ಏಕೆಂದರೆ ನಿರ್ಮಲಾ ಸೀತಾರಾಮನ್ ನಾವು ತುಂಬಾ ನಿಕಟವಾಗಿ ಕೆಲಸ ಮಾಡಿದ ಅತ್ಯಂತ ಉತ್ತಮ ಮಹಿಳೆ. ಇದು ನಿಜವಲ್ಲ ಎಂದು ನಾನು ಭಾವಿಸುತ್ತೇನೆ. ನವೆಂಬರ್‌ನಲ್ಲಿ ಸಂಸತ್ ಪ್ರಾರಂಭವಾದಾಗ ನಾವು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತೇವೆ. ನಾನು ಈ ದೇಶವನ್ನು ಮುನ್ನಡೆಸಲು ಪ್ರಯತ್ನಿಸುತ್ತಿರುವ ಅತ್ಯಂತ ಬಲಿಷ್ಠ ಮತ್ತು ಪ್ರಾಮಾಣಿಕ ಮಹಿಳೆಯಾಗಿ ಅವರನ್ನು ನೋಡಿದ್ದೇನೆ ಮತ್ತು ಈ ಆರೋಪಗಳನ್ನು ಹೊರಿಸಲಾಗಿರುವುದು ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮಹಾರಾಷ್ಟ್ರ ಸೀಟು ಹಂಚಿಕೆ ಕುರಿತು, ಪ್ರಕ್ರಿಯೆ ನಡೆಯುತ್ತಿದೆ ಮತ್ತು ಸ್ಪಷ್ಟತೆ ಪಡೆಯಲು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.