ನವದೆಹಲಿ: ಕೇಂದ್ರ ಸರ್ಕಾರವು ವಕ್ಫ್ ಮಸೂದೆ ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ಮಂಡಿಸಲು ಮುಂದಾಗಿದ್ದು ಇದರ ನಡುವೆ ಕಾಂಗ್ರೆಸ್ ಇಂದು ಲೋಕಸಭೆಯಲ್ಲಿನ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಮುಂದಿನ ಮೂರು ದಿನಗಳವರೆಗೆ ಕಾಂಗ್ರೆಸ್ ಸಂಸದರು ಸದನಕ್ಕೆ ಗೈರಾಗದಂತೆ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.
ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ನಾಳೆ ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ನಂತರ ಕಾಂಗ್ರೆಸ್ ಪಕ್ಷವು ವಿಪ್ ಜಾರಿ ಮಾಡಿದೆ. ಈ ಸಂಬಂಧ ವಿರೋಧ ಪಕ್ಷಗಳು ದೊಡ್ಡ ಸಭೆ ನಡೆಸಿದ್ದು, ವಕ್ಫ್ ಮಸೂದೆಯಲ್ಲಿ ಸರ್ಕಾರವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಕಾರ್ಯತಂತ್ರ ರೂಪಿಸಲಾಗಿದೆ.
ಬುಧವಾರ, ಗುರುವಾರ ಮತ್ತು ಶುಕ್ರವಾರ ಅಂದರೆ ಏಪ್ರಿಲ್ 2, 3 ಮತ್ತು 4, 2025ರಂದು ಲೋಕಸಭೆಯಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು. ಲೋಕಸಭೆಯಲ್ಲಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಈ ಮೂವರು ದಿನವೂ ಬೆಳಿಗ್ಗೆ 11 ಗಂಟೆಯಿಂದ ಸದನದಲ್ಲಿ ಹಾಜರಿದ್ದು ಪಕ್ಷದ ನಿಲುವನ್ನು ಬೆಂಬಲಿಸುವಂತೆ ವಿನಂತಿಸಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಕೆ. ಸುರೇಶ್ ಹೊರಡಿಸಿದ ವಿಪ್‌ನಲ್ಲಿ ತಿಳಿಸಿದ್ದಾರೆ.
ಈ ಮಸೂದೆ ಜಾರಿಗೆ ತರಲು ದೃಢನಿಶ್ಚಯ ಮಾಡಿರುವ ಬಿಜೆಪಿ ನೇತೃತ್ವದ NDA ಸರ್ಕಾರ ಮತ್ತು ಪ್ರಸ್ತಾವಿತ ಕಾಯ್ದೆಯನ್ನು ಅಸಂವಿಧಾನಿಕ ಎಂದು ಖಂಡಿಸುವಲ್ಲಿ ಒಗ್ಗಟ್ಟಿನ ವಿರೋಧ ಪಕ್ಷದ ನಡುವೆ ಪ್ರಮುಖ ಘರ್ಷಣೆಗೆ ವೇದಿಕೆ ಸಿದ್ಧಪಡಿಸಿದಂತಿದೆ. ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ನಾಯಕರನ್ನು ಒಳಗೊಂಡ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಎಂಟು ಗಂಟೆಗಳ ಚರ್ಚೆಗೆ ಒಪ್ಪಿಗೆ ನೀಡಿದೆ ಎಂದು ಅಲ್ಪಸಂಖ್ಯಾತರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸುದ್ದಿಗಾರರಿಗೆ ತಿಳಿಸಿದರು.
ಚರ್ಚೆಯ ಸಮಯದಲ್ಲಿ ಲೋಕಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆಯಿದೆ. ಏಕೆಂದರೆ ವಿರೋಧ ಪಕ್ಷಗಳು ಇದನ್ನು ಬಲವಾಗಿ ವಿರೋಧಿಸುತ್ತಿವೆ ಮತ್ತು ಇದನ್ನು ಸಂವಿಧಾನಬಾಹಿರ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವೆಂದು ಕರೆಯುತ್ತಿವೆ. ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ವಿರೋಧ ಪಕ್ಷಗಳು ಆರಂಭದಿಂದಲೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿವೆ. ಈ ಮಸೂದೆ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿಪಕ್ಷಗಳು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮತ್ತು ದುರುಪಯೋಗವನ್ನು ತಡೆಯಲು ಈ ತಿದ್ದುಪಡಿ ಅಗತ್ಯ ಎಂದು ಸರ್ಕಾರ ಹೇಳಿಕೊಂಡಿದೆ.
ಬಿಜೆಪಿ ತನ್ನ ಸಂಸದರಿಗೆ ವಿಪ್ ಜಾರಿ
ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯ ಸಚೇತಕ ಸಂಜಯ್ ಜೈಸ್ವಾಲ್ ಅವರು, ಏಪ್ರಿಲ್ 2ರ ಬುಧವಾರದಂದು ಎಲ್ಲಾ ಲೋಕಸಭಾ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ನಿರ್ದೇಶನ ನೀಡಿ ವಿಪ್ ಜಾರಿ ಮಾಡಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಕೆಲವು ಪ್ರಮುಖ ಶಾಸಕಾಂಗ ಕಾರ್ಯಗಳು ಅಂಗೀಕಾರವಾಗಲಿದ್ದು, ಇದಕ್ಕಾಗಿ ಪಕ್ಷದ ಎಲ್ಲಾ ಸಂಸದರ ಉಪಸ್ಥಿತಿ ಕಡ್ಡಾಯವಾಗಿದೆ ಎಂದು ಬಿಜೆಪಿ ಹೇಳಿದೆ. ಪಕ್ಷವು ತನ್ನ ಸಂಸದರು ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಬೆಂಬಲ ನೀಡಬೇಕು ಮತ್ತು ಶಾಸಕಾಂಗ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಸೂಚನೆ ನೀಡಿದೆ.