ಹೈದರಾಬಾದ್: ತೆಲಂಗಾಣ ಸರ್ಕಾರವು ಬಹು-ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ ಹರಾಜು ಹಾಕಲು ಯೋಜಿಸಿರುವ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ಭೂಮಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ವಿದ್ಯಾರ್ಥಿಗಳ ಮೇಲೆ ಬುಧವಾರ ಬೆಳಿಗ್ಗೆ ಲಾಠಿ ಚಾರ್ಜ್ ಮಾಡಲಾಗಿದೆ.
ತೆಲಂಗಾಣ ಸರ್ಕಾರದ ಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸುತ್ತಮುತ್ತಲಿನ 400 ಎಕರೆ ಭೂಮಿ ವಿಚಾರವಾಗಿ ವಿವಾದ ಉಂಟಾಗಿರುವ ಮಧ್ಯೆಯೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ ಕವಿತಾ ಬುಧವಾರ, ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪಕ್ಕದಲ್ಲಿಲ್ಲದ ಭೂಮಿಯನ್ನು ಸಾಫ್ಟ್‌ವೇರ್ ಕಂಪನಿಗಳು ಅಥವಾ ಇತರ ಕೈಗಾರಿಕೆಗಳಿಗೆ ಮೂಲಸೌಕರ್ಯವನ್ನು ಕಲ್ಪಿಸಲು ಬಳಸಿಕೊಳ್ಳಬೇಕು ಎಂದು ಹೇಳಿದರು.
'ಕಾಂಗ್ರೆಸ್ ಆಡಳಿತವು ನಿಜವಾಗಿಯೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಮಿಯನ್ನು ಹುಡುಕುತ್ತಿದ್ದರೆ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಈ ಹಿಂದೆ ಹಂಚಿಕೆ ಮಾಡಲಾದ 397 ಎಕರೆಗಳನ್ನು ಬಳಸಿಕೊಳ್ಳಬೇಕು, 400 ಎಕರೆಗಳನ್ನು ಸರಿದೂಗಿಸಬೇಕು. ಬದಲಾಗಿ, ಅದು ಎಚ್‌ಸಿಯುನ 2,500 ಎಕರೆ ಕ್ಯಾಂಪಸ್ ಅನ್ನು ಗುರಿಯಾಗಿಸಿಕೊಂಡಿದೆ. ಇದು ಅದರ ಶ್ರೀಮಂತ ಜೀವವೈವಿಧ್ಯತೆ ಮತ್ತು ಶಾಂತಿಯುತ ಶೈಕ್ಷಣಿಕ ವಾತಾವರಣಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಹೈದರಾಬಾದ್ ಈಗಾಗಲೇ ಅಭಿವೃದ್ಧಿಗೆ ಸಾಕಷ್ಟು ಭೂಮಿಯನ್ನು ಹೊಂದಿದೆ ಮತ್ತು ಎಚ್‌ಸಿಯು ಭೂಮಿಯನ್ನು ಬುಲ್ಡೋಜರ್ ಮಾಡುವುದು ಪರಿಸರ ಸಂರಕ್ಷಣೆ ಮತ್ತು ಶೈಕ್ಷಣಿಕ ಪಾವಿತ್ರ್ಯದ ಬಗ್ಗೆ ಕಾಂಗ್ರೆಸ್‌ನ ನಿರ್ಲಕ್ಷ್ಯವನ್ನು ಬಹಿರಂಗಪಡಿಸುತ್ತದೆ' ಎಂದರು.
'ಸರ್ಕಾರವು ಸಾಫ್ಟ್‌ವೇರ್ ಕಂಪನಿಗಳು ಅಥವಾ ಇತರ ಕೈಗಾರಿಕೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಬಯಸಿದರೆ, ವಿಶ್ವವಿದ್ಯಾಲಯದ ಭೂಮಿಗೆ ಹೊಂದಿಕೊಂಡಿಲ್ಲದ ಉಳಿದ 397 ಎಕರೆ ಭೂಮಿಯನ್ನು ನೀವು ಏಕೆ ಬಳಸಬಾರದು? ಈಗ, ಇಲ್ಲಿನ ಸಮಸ್ಯೆಯೆಂದರೆ ಈ 400 ಎಕರೆ ಭೂಮಿ ವಿಶ್ವವಿದ್ಯಾಲಯದ ಪಕ್ಕದಲ್ಲಿದೆ. ನೀವು ವಿಶ್ವವಿದ್ಯಾಲಯದ ವಾತಾವರಣವನ್ನು ಹಾಳು ಮಾಡಲು ಸಾಧ್ಯವಿಲ್ಲ' ಎಂದು ಬಿಆರ್‌ಎಸ್ ಎಂಎಲ್‌ಸಿ ಎಎನ್‌ಐಗೆ ತಿಳಿಸಿದರು.
ಈ ಭೂಮಿಗಾಗಿ 25 ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ವಿಶ್ವವಿದ್ಯಾಲಯದ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ್ದರೂ, ಕಾಂಗ್ರೆಸ್ ಸರ್ಕಾರವು ಭೂಮಿಯನ್ನು ಸರ್ಕಾರದ ಆಸ್ತಿ ಎಂದು ಹಕ್ಕು ಸಾಧಿಸಲು ಮುಂದಾಗಿದೆ. ಮೂಲತಃ ಇಂದಿರಾ ಗಾಂಧಿಯವರು ನೀಡಿದ ಮತ್ತು ಬಿಆರ್‌ಎಸ್‌ನಿಂದ ರಕ್ಷಿಸಲ್ಪಟ್ಟ ಈ ಭೂಮಿ 25 ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟದ ಕೇಂದ್ರವಾಗಿದೆ. ನ್ಯಾಯಾಲಯವು ಈಗ ಎಚ್‌ಸಿಯು ಪರವಾಗಿ ತೀರ್ಪು ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರವು ಭೂಮಿ ವಿಶ್ವವಿದ್ಯಾಲಯಕ್ಕೆ ಸೇರಿಲ್ಲ, ಸರ್ಕಾರಕ್ಕೆ ಸೇರಿದೆ ಎಂದು ಹೇಳಿಕೊಳ್ಳುತ್ತಿದೆ ಎಂದು ಅವರು ಹೇಳಿದರು.