ಶ್ರೀನಗರ: ಶ್ರೀನಗರದಲ್ಲಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಅದರ ಮಿತ್ರಪಕ್ಷಗಳ ಜಂಟಿ ಶಾಸಕಾಂಗ ಸಭೆಯಲ್ಲಿ, ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಖಂಡಿಸಿ ಮತ್ತು 48 ಅಧಿಕಾರಿಗಳ ವರ್ಗಾವಣೆ ಖಂಡಿಸಿ ಎರಡು ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಇಂದು ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರು ಸೇರಿದಂತೆ ಆಡಳಿತರೂಢ ಎನ್‌ಸಿ ಶಾಸಕರು ಭಾಗವಹಿಸಿದ್ದರು.
ಈದ್ ಹಬ್ಬದಂದು ಜೆ & ಕೆ ಆಡಳಿತ ಸೇವೆ(ಜೆಕೆಎಎಸ್)ಯ 48 ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚುನಾಯಿತ ಸರ್ಕಾರವನ್ನು ಕಡೆಗಣಿಸಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
"ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಒಮರ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರು ಭಾಗವಹಿಸಿದ್ದರು" ಎಂದು ಹಿರಿಯ ಎನ್‌ಸಿ ನಾಯಕ ಮತ್ತು ಶಾಸಕ ತನ್ವೀರ್ ಸಾದಿಕ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಒಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವುದನ್ನು ಖಂಡಿಸುವುದು ಮತ್ತು ಇನ್ನೊಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವುದನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ ಎಂದರು.