ನವದೆಹಲಿ: ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಮಾಡುವ ಭಾಷಣ ಮತ್ತೊಮ್ಮೆ ಐತಿಹಾಸಿಕವಾಗುವ ನಿರೀಕ್ಷೆಯಿದ್ದು, ಹಲವು ಮಹತ್ವದ ಘೋಷಣೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಸಲಹೆಗಳನ್ನು ನೀಡಬೇಕೆಂದು ಕೇಂದ್ರ ಸರ್ಕಾರ ಕರೆ ನೀಡಿದೆ. ನಮೋ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ಪ್ರಧಾನಿ ಭಾಷಣಕ್ಕೆ ಸಲಹೆಗಳು ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಆಹ್ವಾನಿಸಿದೆ.
ಈ ಮನವಿಯ ನಂತರ, ಒಬ್ಬ ವ್ಯಕ್ತಿ ಪ್ರಧಾನಿಯವರು ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸುವುದನ್ನು ಪರಿಗಣಿಸಬೇಕೆಂದು ಸಲಹೆ ನೀಡಿದ್ದಾರೆ.
ವ್ಯಾಪಾರದಲ್ಲಿ ಸ್ಥಳೀಯ ಕೃಷಿ ಆಧಾರಿತ ಚಟುವಟಿಕೆಗಳನ್ನು ಉತ್ತೇಜಿಸಲು ಅನೇಕರು ಶಿಫಾರಸು ಮಾಡಿದ್ದು, ಪದ್ಮಿನಿ ನರಸಿಂಹ ಅವರು ಮಹಿಳೆಯರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವಾಗ ರಫ್ತು ವ್ಯವಹಾರಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದಾರೆ..
ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಬಾರಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಅಥವಾ ಇತರ ಪ್ರಮುಖ ಘೋಷಣೆಗಳನ್ನು ಮಾಡಬಹುದೆಂಬ ಊಹಾಪೋಹ ರಾಜಕೀಯ ವಲಯದಲ್ಲಿದೆ. ಅಲ್ಲದೆ ಪ್ರಧಾನಿ ಮೋದಿ, ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಉಪಕ್ರಮಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
ಈ ವರ್ಷ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಲಿರುವ ಭಾಷಣವು ಐತಿಹಾಸಿಕವಾಗಬಹುದು. ಭಯೋತ್ಪಾದನೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸದಾಗಿ ರೂಪಿಸಲಾದ ರಾಷ್ಟ್ರೀಯ ನೀತಿಗಳ ಕುರಿತು ದೇಶದ ಜನತೆಗೆ ಸಂದೇಶಗಳನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.