ಹತ್ರಾಸ್: ತಾನು ಶಾಸಕನ ಮಗ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿ ಎಂದೂ ಕೂಡ ನೋಡದೇ ಎಗರಾಡಿದ ವ್ಯಕ್ತಿಗೆ ರಸ್ತೆಯಲ್ಲೇ ಟ್ರಾಫಿಕ್ ಪೊಲೀಸರೊಬ್ಬರು ಜಾಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ಬಿಜೆಪಿ ಶಾಸಕರೊಬ್ಬರ ಮಗ ತನ್ನ ಕಾರನ್ನು ಪಕ್ಕಕ್ಕೆ ಸರಿಪಡಿಸುವ ವಿಚಾರವಾಗಿ ಸ್ಥಳೀಯ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಮೂಲಗಳ ಪ್ರಕಾರ ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯ ಚೌಧರಿ ರಿಷಿಪಾಲ್ ಸಿಂಗ್ ಅವರ ಮಗ ತಪೇಶ್ ತನ್ನ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಈ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಕಾನ್‌ಸ್ಟೆಬಲ್ ಎಸ್‌ಪಿ ಸಿಂಗ್‌ಗೆ ಕಾರನ್ನು ತೆಗೆಯುವಂತೆ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಮೇಲೆ ಕೂಗಾಡಿದ ತಪೇಶ್ ನಾನು ಯಾರು ಗೊತ್ತಾ? ಯಾರ ಮಗ ಎಂದು ಗೊತ್ತಾ? ಮೊದಲು ತೊಲಗು ಇಲ್ಲಿಂದ ಎಂದು ಗದರಿದ್ದಾರೆ.
ಇದರಿಂದ ವಿಚಲಿತರಾದ ಟ್ರಾಫಿಕ್ ಪೊಲೀಸ್ ಎಪಿ ಸಿಂಗ್, "ನೀವು ನಿಮ್ಮ ತಂದೆಯ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ" ಎಂದು ಖಾರವಾಗಿ ಹೇಳಿದ್ದಾರೆ. ಅಲ್ಲದೆ ಟ್ರಾಫಿಕ್ ಪೊಲೀಸ್ ಎಪಿ ಸಿಂಗ್ ಇಡೀ ಸಂಭಾಷಣೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಿಜೆಪಿ ನಾಯಕನ ಮಗ ಮತ್ತು ಟ್ರಾಫಿಕ್ ಪೊಲೀಸ್ ನಡುವಿನ ವಾಗ್ವಾದದ ವಿಡಿಯೋ ಈಗ ವೈರಲ್ ಆಗಿದೆ.
ಆಗಿದ್ದೇನು?
ಉತ್ತರ ಪ್ರದೇಶದ ಅಲಿಗಢದಲ್ಲಿ ನೋಂದಾಯಿಸಲಾದ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಬಿಜೆಪಿ ನಾಯಕನ ಪುತ್ರ ತಪೇಶ್ ಇದ್ದರು. ಕಾರಿನ ವಿಂಡ್‌ಶೀಲ್ಡ್‌ನಲ್ಲಿ "ವಿಧಾಯಕ್" ಎಂದು ಬರೆಯಲಾಗಿತ್ತು, ಅದರ ಬಾನೆಟ್‌ನಲ್ಲಿ ಬಿಜೆಪಿ ಧ್ವಜವಿತ್ತು ಮತ್ತು ಬಿಜೆಪಿ ನಾಯಕನ ಮಗನ ಜೊತೆ ಗನ್ ಮ್ಯಾನ್ ಗಳೂ ಕೂಡ ಇದ್ದರು.
ರಸ್ತೆಯಲ್ಲಿ ಈ ಕಾರು ನಿಲ್ಲಿಸಿದ್ದಾಗ, ಈ ಜನನಿಬಿಡ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಟ್ರಾಫಿಕ್ ಪೊಲೀಸ್ ಎಸ್‌ಪಿ ಸಿಂಗ್ ಕಾರನ್ನು ಸಮೀಪಿಸಿ ಚಾಲಕನಿಗೆ ಅದನ್ನು ಸ್ಥಳಾಂತರಿಸಲು ಕೇಳಿಕೊಂಡರು. ಎಂಎಲ್‌ಸಿ ಅವರ ಮಗ "ಭಾಗ್ ಯಹಾನ್ ಸೆ" (ಮೊದಲು ಇಲ್ಲಿಂದ ತೊಲಗು) ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಟ್ರಾಫಿಕ್ ಕಾನ್‌ಸ್ಟೆಬಲ್ ಶಾಸಕನ ಪುತ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ವಾಗ್ವಾದದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಸಂಭಾಷಣೆ ವೈರಲ್
ಟ್ರಾಫಿಕ್ ಪೊಲೀಸ್: ನನಗೆ 55 ವರ್ಷ, ನೀವು "ಇಲ್ಲಿಂದ ತೊಲಗು" ಅಂತ ಹೇಗೆ ಹೇಳ್ತೀರಿ..?
ಎಂಎಲ್‌ಸಿ ಮಗ: ನಿಮಗೆ 55 ವರ್ಷ, ಅದಕ್ಕಾಗಿಯೇ ನಾನು ಗೌರವ ತೋರಿಸುತ್ತಿದ್ದೇನೆ..
ಟ್ರಾಫಿಕ್ ಪೊಲೀಸ್: ಏನು ಗೌರವ? ನೀವು ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದ್ದೀರಿ..
ಎಂಎಲ್‌ಸಿ ಮಗ: ನೀವು ಸರಿಯಾಗಿ ಮಾತನಾಡಬೇಕು. ನೀವು ಇಲಾಖೆಯ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ. ನಾನು ನಿಮ್ಮೊಂದಿಗೆ ಚೆನ್ನಾಗಿ ಸೌಮ್ಯವಾಗಿ ಮಾತನಾಡುತ್ತಿದ್ದೇನೆ.
ಟ್ರಾಫಿಕ್ ಪೊಲೀಸ್: ನೀವು ಚೆನ್ನಾಗಿ ಮಾತನಾಡಿದ್ದರೆ, ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈ ನಿಮ್ಮ ನಡವಳಿಕೆಯಿಂದ ನಿಮ್ಮ ತಂದೆಯ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ
ಎಂಎಲ್‌ಸಿ ಮಗ: ನೀವು ಸರ್ಕಾರದ ಖ್ಯಾತಿಗೆ ಧಕ್ಕೆ ತರುತ್ತಿದ್ದೀರಿ..
ಟ್ರಾಫಿಕ್ ಪೊಲೀಸ್: ನಾನು ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ. ನಾನು ನಿಮಗಿಂತ ಹೆಚ್ಚು ವಿದ್ಯಾವಂತ. ನನಗೆ ಮಾತನಾಡುವುದು ಗೊತ್ತು. ನೀವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ.
ನಂತರ ಎಂಎಲ್‌ಸಿ ಮಗ ತಲೆಯಾಡಿಸಿ, ಏನೋ ಗೊಣಗುತ್ತಾನೆ... ಎಂದು ಹೇಳಿ ಕಾರನ್ನು ಮುಂದಕ್ಕೆ ಚಲಿಸುತ್ತಾನೆ.