ನವದೆಹಲಿ: ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಮತ್ತು ರೇಬಿಸ್ ಪ್ರಕರಣಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ದೆಹಲಿ ಮಹಾನಗರ ಪಾಲಿಕೆ (MCD) ನಗರದ ಬೀದಿಗಳಿಂದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶವನ್ನು ಜಾರಿಗೆ ತರಲು ಪ್ರಾರಂಭಿಸಿದೆ.
ಸುಪ್ರೀಂ ಕೋರ್ಟ್ ಕಳೆದ ಸೋಮವಾರ ನೀಡಿದ ಆದೇಶದ ನಂತರ ದೆಹಲಿ ಮಹಾನಗರ ಪಾಲಿಕೆ ಈಗಾಗಲೇ 100 ನಾಯಿಗಳನ್ನು ಸೆರೆಹಿಡಿದಿದೆ ಎಂದು ಮೇಯರ್ ರಾಜಾ ಇಕ್ಬಾಲ್ ಸಿಂಗ್ ತಿಳಿಸಿದ್ದಾರೆ.
ರೇಬಿಸ್ ಗೆ ಕಾರಣವಾಗುವ ಆಗಾಗ್ಗೆ ನಾಯಿ ಕಡಿತದ ಘಟನೆಗಳಿಂದಾಗಿ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಎಂದು ಗಮನಿಸಿರುವ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರ ಮತ್ತು ಗುರುಗ್ರಾಮ್, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ಮಹಾನಗರ ಪಾಲಿಕೆಗಳಿಗೆ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿತ್ತು.
ಆಕ್ರಮಣಕಾರಿ, ರೇಬಿಸ್ ಸೋಂಕಿತ ಮತ್ತು ಅನಾರೋಗ್ಯಪೀಡಿತ ಪ್ರಾಣಿಗಳಿಂದ ಪ್ರಾರಂಭಿಸಿ, ಹಂತ ಹಂತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಲು ಎಂಸಿಡಿ ನಿರ್ಧರಿಸಿದೆ.
ನಿಗಮದ ಅಸ್ತಿತ್ವದಲ್ಲಿರುವ 20 ಅನಿಮಲ್ ಬರ್ತ್ ಕಂಟ್ರೋಲ್ (ABC) ಕೇಂದ್ರಗಳನ್ನು ಸೆರೆಹಿಡಿಯಲಾದ ನಾಯಿಗಳನ್ನು ಇರಿಸಲು ಆಶ್ರಯ ತಾಣಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ರಾಜಾ ಇಕ್ಬಾಲ್ ಸಿಂಗ್ ಹೇಳಿದರು, ಎರಡನೇ ಹಂತದಲ್ಲಿ, ದ್ವಾರಕಾದಲ್ಲಿರುವ ಎಬಿಸಿ ಕೇಂದ್ರವನ್ನು ವಿಸ್ತರಿಸಲಾಗುವುದು ಮತ್ತು ಮೂರನೇ ಹಂತದಲ್ಲಿ, 85 ಎಕರೆ ಭೂಮಿಯನ್ನು ಹೊಂದಿರುವ ದೆಹಲಿಯ ಹೊರವಲಯದಲ್ಲಿರುವ ಘೋಗಾ ಡೈರಿಯನ್ನು ದೊಡ್ಡ ಆಶ್ರಯ ಸಂಕೀರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಯೋಜನೆಗೆ ಭೂಮಿ ಅಥವಾ ನಿಧಿಯ ಕೊರತೆಯಿಲ್ಲ ಎಂದು ಮೇಯರ್ ಒತ್ತಿ ಹೇಳಿದರು.
ಇದು ಜನರ ಸರ್ಕಾರ, ಬೀದಿ ನಾಯಿ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ಇಲ್ಲಿನ ನಿವಾಸಿಗಳು ಬಹಳ ಸಮಯದಿಂದ ಬಳಲುತ್ತಿದ್ದಾರೆ, ನಾವು ಹೊಂದಿರುವ ಸಂಪನ್ಮೂಲದಲ್ಲಿ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಸ್ತುತ ನಗರದಾದ್ಯಂತ 25 ಎಂಸಿಡಿ ತಂಡಗಳನ್ನು ನಿಯೋಜಿಸಲಾಗಿದ್ದು, ನಿವಾಸಿಗಳ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ಬೀದಿ ನಾಯಿ ಸಂಬಂಧಿತ ಕುಂದುಕೊರತೆ ಪರಿಹಾರವನ್ನು ಸುಗಮಗೊಳಿಸಲು ನಾಗರಿಕ ಸಂಸ್ಥೆಯು ಮೀಸಲಾದ ಸಹಾಯವಾಣಿಯನ್ನು ಸ್ಥಾಪಿಸಲು ಸಹ ಯೋಜಿಸಿದೆ. ಹೆಚ್ಚಿನ ಆಶ್ರಯ ತಾಣಗಳನ್ನು ಸ್ಥಾಪಿಸಲು ನಗರದಾದ್ಯಂತ ಹೆಚ್ಚುವರಿ ಭೂಮಿಯನ್ನು ಹುಡುಕುವುದು ಎಂಸಿಡಿಯ ಯೋಜನೆಯಲ್ಲಿ ಸೇರಿದೆ.
85 ಎಕರೆ ವಿಸ್ತೀರ್ಣದ ಘೋಗಾ ಡೈರಿ ತಾಣವು ಕಾರ್ಯರೂಪಕ್ಕೆ ಬಂದರೆ, ಹೆಚ್ಚಿನ ಸಂಖ್ಯೆಯ ಪ್ರಾಣಿಗಳಿಗೆ ಅಲ್ಲಿ ಆಶ್ರಯ ಕಲ್ಪಿಸಬಹುದು. ಇದು ಇತರ ಸೌಲಭ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.