ಕೋಲ್ಕತ್ತಾ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಸ್ಫೋಟಗೊಂಡ ಪರಿಣಾಮ ಡೆಲಿವರಿ ಏಜೆಂಟ್ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.
ಬುಧವಾರ ಸಂಜೆ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಸೌಮೆನ್ ಮಂಡಲ್ ಎಂದು ಗುರುತಿಸಲಾಗಿದ್ದು, ಇದೀಗ ಈ ಅಪಘಾತ ವಿಚಾರ ಕೋಲ್ಕತಾದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಆಗಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ, ಸೌಮೆನ್ ಡೆಲಿವರಿ ಎಕ್ಸಿಕ್ಯೂಟಿವ್ ಮತ್ತು ಬೈಕ್ ಕ್ಯಾಬ್ ಸವಾರನಾಗಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದ. ಆತ ನಿನ್ನೆ ಸಂಜೆ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದ ಜಂಕ್ಷನ್ ನಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನೊಂದಿಗೆ ಸಿಗ್ನಲ್ ಗಾಗಿ ಕಾಯುತ್ತಿದ್ದಾಗ, ವೇಗವಾಗಿ ಬಂದ ಕಾರು ಸೌಮೆನ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ವೇಳೆ ಕಾರು ಢಿಕ್ಕಿಯಾದ ರಭಸಕ್ಕೆ ಕಾರು ಸೌಮೆನ್ ಸಮೇತ ರಸ್ತೆ ಪಕ್ಕದ ಕಬ್ಬಿಣದ ತಡೆಗೋಡೆ ಗುದ್ದಿಕೊಂಡು ಹೋಗಿದೆ. ರಸ್ತೆಯ ಪಕ್ಕದಲ್ಲಿರುವ ಕಬ್ಬಿಣದ ಕಂಬಿ ಮತ್ತು ಕಾರಿನ ಬಾನೆಟ್ ನಡುವೆ ಸಿಲುಕೊಂಡು ಸೌಮೆನ್ ಒದ್ದಾಡುತ್ತಿದ್ದಾಗಲೇ ಕಾರು ಸ್ಫೋಟಗೊಂಡಿದೆ. ಈ ವೇಳೆ ಸೌಮೆನ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಈ ದುರಂತದಲ್ಲಿ ಸೌಮೆನ್ ಜೊತೆ ಇದ್ದ ಹಿಂಬದಿ ಸವಾರ ಮತ್ತು ಕಾರು ಚಾಲಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು ಆದರೆ ಬೈಕ್ ಚಾಲನೆ ಮಾಡುತ್ತಿದ್ದ ಸೌಮೆನ್ ಮಾತ್ರ ದುರಂತ ಸಾವಿಗೀಡಾಗಿದ್ದಾರೆ. ಸೌಮೆನ್ ಕಾಲು ಕಬ್ಬಿಣದ ಸಲಾಕೆಗಳ ನಡುವೆ ಸಿಲುಕಿದ್ದರಿಂದ ಆತ ಹೊರ ಬರಲಾಗಲಿಲ್ಲ. ಇದೇ ಸಂದರ್ಭದಲ್ಲೇ ಕಾರು ಸ್ಫೋಟವಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಇನ್ನು ಈ ದುರಂತ ಕೋಲ್ಕತಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸೌಮೆನ್ ಸಾವಿಗೆ ಪೊಲೀಸರ ವಿಳಂಬವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಪಘಾತ ನಡೆದು 12 ಗಂಟೆಗಳಾದರೂ ಪೊಲೀಸರು ಬಂಧಿಸದಿದ್ದಕ್ಕಾಗಿ ಸೌಮೆನ್ ಮಂಡಲ್ ಅವರ ಕುಟುಂಬವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಪೊಲೀಸರು ಸೌಮೆನ್ ಉಳಿಸಲು ಸಾಕಷ್ಟು ಪ್ರಯತ್ನಿಸಲಿಲ್ಲ. ಸೂಕ್ತ ಸಂದರ್ಭದಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಸೌಮೆನ್ ಸಿಲುಕಿಕೊಂಡೇ ಇದ್ದರು. ಅಪಘಾತದ ಕೆಲವೇ ಕ್ಷಣಗಳಲ್ಲಿ ಕಾರು ಬೆಂಕಿಗೆ ಆಹುತಿಯಾಗಿ, ಆತ ಸುಟ್ಟು ಕರಕಲಾದ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸೌಮೆನ್ ಬೈಕ್ ನ ಹಿಂಬದಿ ಸವಾರನ ಸೊಂಟ ಮತ್ತು ತೋಳಿನಲ್ಲಿ ಮೂಳೆ ಮುರಿತಗಳು ಕಂಡುಬಂದಿವೆ ಎಂದು ಹೇಳಲಾಗಿದೆ. ಅಪಘಾತ ಮಾಡಿದ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.