ನವದೆಹಲಿ: ರೈತರು, ಕುರಿಗಾಹಿಗಳು, ಮೀನುಗಾರರ ಹಿತಾಸಕ್ತಿಗಳ ವಿಚಾರದಲ್ಲಿ ಗೋಡೆಯಂತೆ ನಿಲ್ಲುತ್ತೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿಯವರು ತಿರುಗೇಟು ನೀಡಿದ್ದಾರೆ.
79 ನೇ ಸ್ವಾತಂತ್ರ್ಯ ದಿನ ಹಿನ್ನೆಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ರೈತರು, ಮೀನುಗಾರರು ಮತ್ತು ಜಾನುವಾರು ಸಾಕಣೆದಾರರಿಗೆ ಸಂಬಂಧಿಸಿದ ಯಾವುದೇ ಹಾನಿಕಾರಕ ನೀತಿಯ ವಿರುದ್ಧ ಮೋದಿ ಗೋಡೆಯಂತೆ ನಿಲ್ಲಲಿದ್ದಾರೆ. ರೈತರು, ಜಾನುವಾರು ಸಾಕಣೆದಾರರು, ಮೀನುಗಾರರ ಬಗ್ಗೆ ಯಾವುದೇ ರಾಜಿಯನ್ನು ಭಾರತ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ದೇಶದ ಪ್ರತಿಯೊಬ್ಬರಿಗೂ ಆಹಾರ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ರೈತರು ನಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿಯ ನಿರ್ಧಾರ ಗೋಡೆಯಂತೆ ಅಚಲವಾಗಿದ್ದು, ರೈತರ ಹಿತಾಸಕ್ತಿ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ದವಿಲ್ಲ ಎಂದು ಟ್ರಂಪ್ ಅವರಿಗೆ ಸಂದೇಶ ರವಾನಿಸಿದ್ದಾರೆ.
ನಾವು ಇನ್ನೊಂದು ದೇಶದ ಮೇಲೆ ಅವಲಂಬಿತರಾಗುವುದೇ ದೊಡ್ಡ ದುರಂತ. ಅದಕ್ಕಾಗಿಯೇ ಕೇಂದ್ರ ಸರ್ಕಾರ “ಆತ್ಮನಿರ್ಭರ್ ಭಾರತ್” ಗೆ ಹೆಚ್ಚು ಆದ್ಯತೆ ನೀಡಿದ್ದು, ನಾವು ಸ್ವಾವಲಂಬಿಯಾಗಲು ಇದು ಅತ್ಯಗತ್ಯ ಎಂದು ಹೇಳಿದರು.
ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಲು ನಮ್ಮದೇ ಆದ ರಸಗೊಬ್ಬರಗಳು ಮತ್ತು ಯುದ್ಧ ವಿಮಾನಗಳಿಗೆ ಸ್ಥಳೀಯ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಸ್ಪಷ್ಟ ಕರೆ ನೀಡಿದರು.
ನಮ್ಮ ಇಂಧನ ಅಗತ್ಯಗಳನ್ನು ಪೂರೈಸಲು ನಾವು ಅನೇಕ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ ಎಂದು ನಮಗೆ ತಿಳಿದಿದೆ. ಆದರೆ, ನಿಜವಾದ ಸ್ವಾವಲಂಬಿ ಭಾರತವನ್ನು ನಿರ್ಮಿಸಲು, ನಾವು ಇಂಧನ ಸ್ವಾತಂತ್ರ್ಯವನ್ನು ಸಾಧಿಸಬೇಕು ಎಂದರು.
ಕಳೆದ 11 ವರ್ಷಗಳಲ್ಲಿ, ನಮ್ಮ ಸೌರಶಕ್ತಿ ಸಾಮರ್ಥ್ಯವು 30 ಪಟ್ಟು ಹೆಚ್ಚಾಗಿದೆ. ಹತ್ತು ಹೊಸ ಪರಮಾಣು ರಿಯಾಕ್ಟರ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಭಾರತವು 100ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ನಮ್ಮ ಪರಮಾಣು ಶಕ್ತಿ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.