ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು ಬಂಧನಕ್ಕೊಳಗಾದರೆ, ಅವರನ್ನು ಪದಚ್ಯುತಗೊಳಿಸುವ ಮಸೂದೆಯನ್ನು ಬುಧವಾರ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ– 2025 ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಈ ಮೂರೂ ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸುವ ಗೊತ್ತುವಳಿಯನ್ನೂ ಅಮಿತ್ ಶಾ ಅವರು ಮಂಡಿಸಲಿದ್ದಾರೆ.
ಮಸೂದೆಯ ಪ್ರಕಾರ, 30 ದಿನಗಳ ಕಾಲ ನಿರಂತರ ಬಂಧನದಲ್ಲಿದ್ದವರನ್ನು 31ನೇ ದಿನ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಬಂಧನದಿಂದ ಬಿಡುಗಡೆ ಆದವರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ಗಂಭೀರ ಸ್ವರೂಪದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥಹವರನ್ನು ಹುದ್ದೆಗಳಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಕಾರಣಗಳು ಮತ್ತು ಉದ್ದೇಶಗಳಲ್ಲಿ ತಿಳಿಸಲಾಗಿದೆ.
ಇದಕ್ಕಾಗಿ ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5(ಎ) ಅನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಅದರ ಪ್ರಕಾರ, ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಕ್ಕಾಗಿ ಸತತ 30 ದಿನಗಳಿಂದ ಬಂಧನದಲ್ಲಿರುವ ಅಥವಾ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಯು 31ನೇ ದಿನದಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕು. ಪ್ರಧಾನಿಯು, ಶಿಫಾರಸು ಮಾಡದಿದ್ದರೂ ಅಂಥಹ ಸಚಿವರು 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ.
ಅಂಥಹದ್ದೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿಯು 30 ದಿನಗಳಿಂದ ಬಂಧನದಲ್ಲಿದ್ದರೆ 31ನೇ ದಿನದಂದು ಅವರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ರಾಜೀನಾಮೆ ನೀಡದೇ ಇದ್ದಲ್ಲಿ, ಸ್ವಯಂಚಾಲಿತವಾಗಿ ಪದಚ್ಯುತರಾಗುತ್ತಾರೆ ಎಂಬ ಅಂಶ ಮಸೂದೆಯಲ್ಲಿದೆ.
ಈ ಮಾದರಿಯು ರಾಜ್ಯಗಳ ಮುಖ್ಯಮಂತ್ರಿ ಮತ್ತು ಸಚಿವರಿಗೂ ಅನ್ವಯವಾಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ. ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ ಎಂಬ ಉಲ್ಲೇಖ ಮಸೂದೆಯಲ್ಲಿದೆ.
ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಹಾಲಿ ಇರುವ ನಿಯಮಗಳ ಅನ್ವಯ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷ ಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ತಮ್ಮ ಜನಪ್ರತಿನಿಧಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಜೊತೆಗೆ ಶಿಕ್ಷೆ ಮುಗಿದ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.