ಲಖನೌ: ಪಶ್ಚಿಮ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ಪಟ್ಟಣವನ್ನು ಬುಧವಾರ ಪರಶುರಾಮಪುರಿ ಎಂದು ಮರುನಾಮಕರಣ ಮಾಡಲಾಗಿದೆ.
ಬಹಳ ದಿನಗಳಿಂದ ಈ ಬೇಡಿಕೆ ಬಾಕಿ ಇದ್ದ ಕಾರಣ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಲಾಲಾಬಾದ್ ಪಟ್ಟಣದ ಮರುನಾಮಕರಣಕ್ಕೆ ಅನುಮೋದನೆ ನೀಡಿದ್ದಾರೆ. ಈ ಕ್ರಮವನ್ನು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ.
ಮೂಲಗಳ ಪ್ರಕಾರ, ಗೃಹ ಸಚಿವಾಲಯವು(MHA) ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹೆಸರು ಬದಲಾಯಿಸುವ ಪ್ರಸ್ತಾವನೆ ಅನುಮೋದಿಸುವಂತೆ ಕೋರಿ ಮನವಿ ಪತ್ರ ಸ್ವೀಕರಿಸಿದೆ. "ಜಲಾಲಾಬಾದ್" ಪಟ್ಟಣವನ್ನು "ಪರಶುರಾಮಪುರಿ" ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ "ಯಾವುದೇ ಆಕ್ಷೇಪಣೆ" ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಮೂಲಗಳ ಪ್ರಕಾರ, ಯುಪಿ ಸರ್ಕಾರ, ಗೃಹ ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ, ಜಲಾಲಾಬಾದ್ ಪಟ್ಟಣವನ್ನು ಭಗವಾನ್ ಪರಶುರಾಮರ ಜನ್ಮಸ್ಥಳ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದೆ. ಅಲ್ಲದೆ ಇದು ಪರಶುರಾಮನ ಪ್ರಾಚೀನ ದೇವಾಲಯವನ್ನೂ ಹೊಂದಿದೆ ಮತ್ತು ಜಲಾಲಾಬಾದ್ ಪುರಸಭೆ ಮಂಡಳಿಯು ನಗರಕ್ಕೆ ಭಗವಾನ್ ಪರಶುರಾಮನ ಹೆಸರಿಡಲು ನಿರ್ಣಯ ಅಂಗೀಕರಿಸಿತ್ತು.