ನವದೆಹಲಿ: ಸತತ 30 ದಿನ ಜೈಲು ಶಿಕ್ಷೆಗೆ ಗುರಿಯಾದರೆ ಪ್ರಧಾನಿ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆ ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿಗೆ (JPC) ಸೇರದಿರಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದೆ.
ಮಸೂದೆಗೆ ವಿರೋಧ ವ್ಯಕ್ತಪಡಿಸಿ ಜಂಟಿ ಸಂಸದೀಯ ಸಮಿತಿ ಸೇರಲ್ಲ ಎಂದು ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಹೇಳಿದ್ದವು. ಇದೀಗ ಆಮ್ ಆದ್ಮಿ ಪಕ್ಷ ಕೂಡಾ JPC ಸೇರಲ್ಲ ಎಂದು ಹೇಳಿದೆ.
ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವುದು ಪ್ರಸ್ತಾವಿತ ಮಸೂದೆಯ ಉದ್ದೇಶವಾಗಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಮೂರು ಮಸೂದೆಗಳು ಅಸಂವಿಧಾನಿಕವಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತವೆ ಎಂದು AAP ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಂಜಯ್ ಸಿಂಗ್, ಜಂಟಿ ಸಂಸದೀಯ ಸಮಿತಿಗೆ ಯಾವುದೇ ಸದಸ್ಯರನ್ನು ನಾಮನಿರ್ದೇಶನ ಮಾಡದಿರಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು ಹೇಳಿದ್ದಾರೆ.
'ಭ್ರಷ್ಟರ ನಾಯಕ ಭ್ರಷ್ಟಾಚಾರದ ವಿರುದ್ಧ ಮಸೂದೆ ತರುವುದು ಹೇಗೆ? ನಾಯಕರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಹಾಕುವುದು, ಸರ್ಕಾರಗಳನ್ನು ಉರುಳಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸಿಂಗ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.