ಮುಂಬೈ: ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಮಹಾಯುತಿ ಮೈತ್ರಿಕೂಟದ ಪಕ್ಷಗಳ ನಡುವೆ 'ನೀನಾ-ನಾನಾ' ಜಗಳ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗನ ಸಂಘರ್ಷವನ್ನು ಒಪ್ಪಿಕೊಂಡಿದ್ದಾರೆ. ಆದರೆ ಇಬ್ಬರೂ ನಾಯಕರು ಈ ಚುನಾವಣೆ ಸ್ಥಳೀಯ ಸಮಸ್ಯೆಗಳು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಒತ್ತಿ ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗಿನ ಇತ್ತೀಚಿನ ಆರೋಪ ಪ್ರತ್ಯಾರೋಪಗಳನ್ನು ಶಿಂಧೆ ಒಪ್ಪಿಕೊಂಡಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ತಳಮಟ್ಟದ ಸಮಸ್ಯೆಗಳು ಮತ್ತು ಪಕ್ಷದ ಕಾರ್ಯಕರ್ತರ ಕೆಲಸದ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಹೇಳಿದರು.
ಇಂದು ಛತ್ರಪತಿ ಸಂಭಾಜಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, "ಹೌದು, ನಾನು ಸಿಎಂ ವಿರುದ್ಧ ಆರೋಪಗಳನ್ನು ಮಾಡಿದ್ದು ನಿಜ ಮತ್ತು ಅವರು ನನ್ನ ವಿರುದ್ಧವೂ ಆರೋಪಗಳನ್ನು ಮಾಡಿದ್ದಾರೆ. ಆದರೆ ಈ ಚುನಾವಣೆ ಸ್ಥಳೀಯ ಚುನಾವಣೆಗಳಾಗಿವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇವುಗಳನ್ನು ಸ್ಥಳೀಯ ವಿಷಯಗಳ ಮೇಲೆ ಹೋರಾಡಲಾಗುತ್ತದೆ ಮತ್ತು ಸ್ಥಳೀಯ ಪಕ್ಷದ ಕಾರ್ಯಕರ್ತರು ಹೋರಾಡುತ್ತಾರೆ ಎಂದರು.
ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ದೊಡ್ಡ ರಾಜಕೀಯ ವಿಷಯಗಳನ್ನು ಎತ್ತುವ ಅಗತ್ಯವಿಲ್ಲ. ಆದರೆ ಪಕ್ಷದ ಕಾರ್ಯಕರ್ತರು ತಮ್ಮ ಹಿರಿಯ ನಾಯಕತ್ವವು ಈ ಚುನಾವಣಾ ಪ್ರಚಾರಗಳಲ್ಲಿ ತಮ್ಮೊಂದಿಗೆ ಭಾಗಿಯಾಗುವುದನ್ನು ನೋಡಲು ಇಷ್ಟಪಡುತ್ತಾರೆ" ಎಂದರು.
ಏತನ್ಮಧ್ಯೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಪಕ್ಷದ ಕಾರ್ಯಕರ್ತರೇ ನಡೆಸುತ್ತಾರೆ ಎಂದು ಹೇಳಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎದುರಾಳಿಗಳು ಅಥವಾ ಮಿತ್ರಪಕ್ಷಗಳ ವಿರುದ್ಧ ಟೀಕೆ ಮಾಡುವುದನ್ನು ತಪ್ಪಿಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರ ಮೇಲೆ ಮಾತ್ರ ಗಮನಹರಿಸಿದ್ದಾರೆ ಎಂದು ಒತ್ತಿ ಹೇಳಿದರು.
"ಇವು ಸ್ಥಳೀಯ ಸಂಸ್ಥೆ ಚುನಾವಣೆಗಳಾಗಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ನಮ್ಮ ಕಾರ್ಯಕರ್ತರ ಪರ ಪ್ರಚಾರ ಮಾಡಲು ಮತ್ತು ಬೆಂಬಲಿಸಲು ನಾವು ಚುನಾವಣೆ ನಡೆಯುತ್ತಿರುವ ರಾಜ್ಯದ ಎಲ್ಲಾ ಭಾಗಗಳನ್ನು ತಲುಪಲು ಪ್ರಯತ್ನಿಸುತ್ತೇವೆ. ಅದೇ ಕಾರ್ಯಕರ್ತರು ನಮ್ಮ ಪ್ರಚಾರದಲ್ಲಿ ತುಂಬಾ ಶ್ರಮಿಸುತ್ತಾರೆ. ಆದ್ದರಿಂದ ಅವರ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಅದನ್ನು ಎಲ್ಲರೂ ಮಾಡುತ್ತಾರೆ" ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು.