ಕೊಚ್ಚಿ: 2017 ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದ ಒಂದು ಭಾಗ "ತನ್ನ ವಿರುದ್ಧ ಪಿತೂರಿ" ನಡೆಸುತ್ತಿದೆ ಎಂದು ಮಲಯಾಳಂ ನಟ ದಿಲೀಪ್ ಸೋಮವಾರ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಖುಲಾಸೆಗೊಂಡ ಸ್ವಲ್ಪ ಸಮಯದ ನಂತರ ಮಾತನಾಡಿದ ದಿಲೀಪ್ ಅವರು, ತನ್ನ ವೃತ್ತಿಜೀವನವನ್ನು ಹಾಳು ಮಾಡುವ ಉದ್ದೇಶದಿಂದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದರದ ಹಿಂದೆ "ಪಿತೂರಿ" ಇದೆ ಎಂದು ಆರೋಪಿಸಿದರು.
"ನನ್ನ ವೃತ್ತಿ, ಇಮೇಜ್ ಮತ್ತು ಸಮಾಜದಲ್ಲಿನ ಗೌರವವನ್ನು ಹಾಳುಮಾಡಲು ಇದನ್ನು ಮಾಡಲಾಗಿದೆ" ಎಂದು ಸ್ಥಳೀಯ ನ್ಯಾಯಾಲಯವು ತಮ್ಮನ್ನು ಖುಲಾಸೆಗೊಳಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ತಮ್ಮ ಮಾಜಿ ಪತ್ನಿ ಮತ್ತು ಪ್ರಮುಖ ನಟಿ ಮಂಜು ವಾರಿಯರ್ ಅವರನ್ನು ಟೀಕಿಸಿದ ನಟ ದೀಲಿಪ್ ಅವರು, ಮಂಜು ವಾರಿಯರ್, ನಟಿ ಮೇಲಿನ ಲೌಂಗಿಕ ದೌರ್ಜನ್ಯದ ಹಿಂದೆ ಕ್ರಿಮಿನಲ್ ಪಿತೂರಿ ಇದೆ ಮತ್ತು ಅದನ್ನು ತನಿಖೆ ಮಾಡಬೇಕು ಎಂಬ ಹೇಳಿದ ನಂತರ ತಮ್ಮ ವಿರುದ್ಧ ಸಂಪೂರ್ಣ ಪಿತೂರಿ ಆರಂಭವಾಯಿತು ಎಂದರು.
ನೇರವಾಗಿ ಯಾರ ಹೆಸರನ್ನು ಪ್ರಸ್ತಾಪಿಸದೆ, ಉನ್ನತ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಪ್ರಕರಣದ ತನಿಖೆಗಾಗಿ ಅವರನ್ನು ಆಯ್ಕೆ ಮಾಡಿದ "ಕ್ರಿಮಿನಲ್ ಪೊಲೀಸ್" ಗುಂಪು ತಮ್ಮ ವಿರುದ್ಧ ಕ್ರಮ ಕೈಗೊಂಡಿದೆ ಎಂದು ನಟ ಆರೋಪಿಸಿದರು.
ಪ್ರಕರಣದ ಪ್ರಮುಖ ಆರೋಪಿ ಮತ್ತು ಜೈಲಿನಲ್ಲಿರುವ ಸಹ-ಕೈದಿಯ ಬೆಂಬಲದೊಂದಿಗೆ ತಮ್ಮ ವಿರುದ್ಧ ಸುಳ್ಳು ಕಥೆ ಹೆಣೆದಿದ್ದಾರೆ. ಆ ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮದ ಒಂದು ವಿಭಾಗವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ವಿರುದ್ಧ ಸುಳ್ಳು ಕಥೆಯನ್ನು ಪ್ರಚಾರ ಮಾಡಿತ್ತು ಎಂದು ದಿಲೀಪ್ ಮತ್ತಷ್ಟು ಆರೋಪಿಸಿದರು.
"ಇಂದು, ಪೊಲೀಸರು ರೂಪಿಸಿದ ಆ ಸುಳ್ಳು ಕಥೆ ನ್ಯಾಯಾಲಯದಲ್ಲಿ ಛಿದ್ರಗೊಂಡಿದೆ" ಎಂದು ನಟ-ನಿರ್ಮಾಪಕ ಕಿಡಿ ಕಾರಿದರು.
ಹಲವು ವರ್ಷಗಳ ತಮ್ಮ ಕಾನೂನು ಹೋರಾಟದ ಉದ್ದಕ್ಕೂ ತಮ್ಮನ್ನು ಬೆಂಬಲಿಸಿದ ಅವರ ಕುಟುಂಬ, ವಕೀಲರು ಮತ್ತು ಅಭಿಮಾನಿಗಳಿಗೆ ಅವರು ಧನ್ಯವಾದ ಹೇಳಿದರು.
ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಸೋಮವಾರ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.