ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಮೆಸ್ಸಿ ಅವರು ಇಂದು ಕೋಲ್ಕತ್ತಾಗೆ ಭೇಟಿ ನೀಡಿದ ಅಲ್ಪಾವಧಿಯಲ್ಲಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ಆಕ್ರೋಶಗೊಂಡು ದಾಂಧಲೆ ಎಬ್ಬಿಸಿದ ಘಟನೆ ನಡೆದಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಸರ ಹೊರಹಾಕಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿರುವುದಾಗಿ ಹೇಳಿದ್ದಾರೆ.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಇಂದು ನಡೆದ ಘಟನೆಯಿಂದ ನಾನು ತೀವ್ರ ನೊಂದಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ನೋಡಲು ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳು ಮತ್ತು ಅಭಿಮಾನಿಗಳೊಂದಿಗೆ ನಾನು ಕ್ರೀಡಾಂಗಣಕ್ಕೆ ಹೋಗುವ ಸಮಯದಲ್ಲಿ ಈ ಘಟನೆ ನಡೆದಿದೆ.
ಈ ದುರದೃಷ್ಟಕರ ಘಟನೆಗೆ ಲಿಯೋನೆಲ್ ಮೆಸ್ಸಿ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ತನಿಖೆಗೆ ಆದೇಶ
ನ್ಯಾಯಮೂರ್ತಿ (ನಿವೃತ್ತ) ಆಶಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿರುವ ತನಿಖಾ ಸಮಿತಿಯನ್ನು ರಚಿಸುತ್ತಿದ್ದೇನೆ. ಸಮಿತಿಯು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.