ಡೆಹ್ರಾಡೂನ್: ಅಧ್ಯಯನಕ್ಕೆಂದು ವಿದ್ಯಾರ್ಥಿವೀಸಾದಲ್ಲಿ ಭಾರತದಿಂದ ರಷ್ಯಾಕ್ಕೆ ಹೋದ ಉತ್ತರಾಖಂಡದ ಯುವಕನೋರ್ವ ಶವವಾಗಿ ಭಾರತಕ್ಕೆ ಬಂದಿದ್ದಾನೆ. 30 ವರ್ಷದ ರಾಕೇಶ್ ಕುಮಾರ್ ಮೃತ ಯುವಕ.
ಉಕ್ರೇನ್ ವಿರುದ್ಧದ ಸಂಘರ್ಷದಲ್ಲಿ ಬಲವಂತವಾಗಿ ಅವರನ್ನು ರಷ್ಯಾ ಸೇನೆಯಲ್ಲಿ ಸೇರಿಸಿಕೊಂಡಿದ್ದು, ಯುದ್ಧದಲ್ಲಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತದೇಹವನ್ನು ಸ್ವದೇಶಕ್ಕೆ ತರಲಾಗಿದ್ದು ಬುಧವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೃತದೇಹವನ್ನು ತದನಂತರ ಸಿತಾರಗಂಜ್‌ಗೆ ಸಾಗಿಸಲಾಯಿತು. ಶೋಕ ಸಾಗರದ ನಡುವೆ ಶಕ್ತಿ ಫಾರ್ಮ್‌ನಲ್ಲಿರುವ ತಾರ್ಕನಾಥ ಧಾಮದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ರಷ್ಯಾಕ್ಕೆ ಬಂದ ಸ್ವಲ್ಪ ಸಮಯದ ನಂತರ, ರಾಕೇಶ್ ಅವರ ಪಾಸ್ ಪೋರ್ಟ್ ಮತ್ತು ವೀಸಾವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅವರನ್ನು ಬಲವಂತದಿಂದ ಮಿಲಿಟರಿ ಸೇವೆಗೆ ಸೇರಿಸಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಕೇಶ್ ಕುಟುಂಬದೊಂದಿಗೆ ಕೊನೆಯ ಸಂಪರ್ಕ: ತಮ್ಮ ಮಗ ಅಧ್ಯಯನಕ್ಕಾಗಿ ಆಗಸ್ಟ್ 8 ರಂದು ರಷ್ಯಾಕ್ಕೆ ತೆರಳಿದ್ದರು ಎಂದು ರಾಕೇಶ್ ಅವರ ತಂದೆ ರಾಜಬಹದ್ದೂರ್ ಮೌರ್ಯ ತಿಳಿಸಿದ್ದಾರೆ. ಆಗಸ್ಟ್ 30 ರ ನಂತರ ಆತನೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ತನಗೆ ರಷ್ಯಾದಲ್ಲಿ ಸೇನಾ ತರಬೇತಿ ನೀಡಲಾಗುತ್ತಿದೆ ಮತ್ತು ಉಕ್ರೇನ್ ಯುದ್ಧದಲ್ಲಿ ಹೋರಾಡಲು ಕಳುಹಿಸಲಾಗುವುದು ಎಂದು ಹೇಳಿಕೊಂಡಿದ್ದರು. ಆ ನಂತರ ಯಾವುದೇ ಸಂಪರ್ಕ ಇರಲಿಲ್ಲ ಎಂದು ಅವರು ತಿಳಿಸಿದರು.
ರಾಕೇಶ್ ಕೊನೆಯ ಸಂಪರ್ಕದಿಂದ ಗಾಬರಿಗೊಂಡ ಅವರ ಕುಟುಂಬವು ಆತನನ್ನು ಮರಳಿ ದೇಶಕ್ಕೆ ಕರೆಯಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿತು. ದೆಹಲಿಗೆ ಪ್ರಯಾಣಿಸಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ತುರ್ತು ಮಧ್ಯಸ್ಥಿಕೆಗೆ ಮನವಿ ಮಾಡಿದ್ದರು. ರಾಕೇಶ್ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು ಎನ್ನಲಾಗಿದೆ.
ವಿದೇಶದಲ್ಲಿ ಶಿಕ್ಷಣ ಪಡೆಯಲು ಹೋಗುವ ಭಾರತೀಯ ವಿದ್ಯಾರ್ಥಿಗಳ ನೈಜತೆ ಬಹಿರಂಗ: ಈ ಭರವಸೆಗಳ ಹೊರತಾಗಿಯೂ ಹತ್ತು ದಿನಗಳ ಹಿಂದೆ ಕುಟುಂಬಕ್ಕೆ ವಿನಾಶಕಾರಿ ಸುದ್ದಿಯೊಂದು ಸಿಕ್ಕಿತ್ತು. ರಾಕೇಶ್ ಕುಮಾರ್ ಹುತಾತ್ಮರಾಗಿದ್ದರು. ರಾಕೇಶ್ ಕುಮಾರ್ ಅವರ ಸಾವು ವಿದೇಶದಲ್ಲಿ ಶಿಕ್ಷಣ ಪಡೆಯಲು ಹೋಗುವ ಅಸಂಖ್ಯಾತ ಭಾರತೀಯ ವಿದ್ಯಾರ್ಥಿಗಳ ನೈಜತೆಯನ್ನು ಬಹಿರಂಗಪಡಿಸುತ್ತದೆ. ಅಂತಾರಾರಾಷ್ಟ್ರೀಯ ಸಂಘರ್ಷಗಳಲ್ಲಿ ಸಿಲುಕಿದಾಗ ಅವರು ಎದುರಿಸುವ ತೀವ್ರ ಅಪಾಯಗಳನ್ನು ಎತ್ತಿ ತೋರಿಸುತ್ತದೆ.