ಮುಂಬೈ: ಮಹಾ ವಿಕಾಸ್ ಅಘಾಡಿಗೆ ಕಾಂಗ್ರೆಸ್ ದೊಡ್ಡ ಹೊಡೆತ ನೀಡಿದ್ದು, ಏಷ್ಯಾದ ಅತಿದೊಡ್ಡ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದೆ.
ಬಿಎಂಸಿ ಮತ್ತು ಇತರ 28 ಮುನ್ಸಿಪಲ್ ಕಾರ್ಪೊರೇಷನ್‌ಗಳ ಚುನಾವಣೆಗೆ ಮುಂದಿನ ವರ್ಷ ಜನವರಿ 15 ರಂದು ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ ಮತ್ತು ಮುಂಬೈ ಕಾಂಗ್ರೆಸ್ ಉಸ್ತುವಾರಿ, ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಇಂದು ಪರಿಶೀಲನಾ ಸಭೆ ನಡೆಸಿದರು. ಬಳಿಕ, ಸಭೆಯಲ್ಲಿ ಬಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.
ಬಿಜೆಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ವಿರುದ್ಧವೂ ಕಾಂಗ್ರೆಸ್ ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಚೆನ್ನಿತ್ತಲ ಹೇಳಿದರು.
"ನಾವು ನಮ್ಮ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಜನರ ಮುಂದೆ ಇಡುತ್ತೇವೆ. ಬಿಎಂಸಿಯಲ್ಲಿ ಆಡಳಿತ ನಡೆಸಲು ನಮಗೆ ಅವಕಾಶ ನೀಡಬೇಕೆಂದು ನಾವು ಮುಂಬೈ ಜನರಿಗೆ ಮನವಿ ಮಾಡುತ್ತೇವೆ. ನಾವು ಅದನ್ನು ಉತ್ತಮ ರೀತಿಯಲ್ಲಿ ನಡೆಸುತ್ತೇವೆ" ಎಂದು ಚೆನ್ನಿತ್ತಲ ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ಬಾಕಿ ಇರುವುದರಿಂದ, ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಚುನಾವಣೆ ನಡೆಯುತ್ತಿದೆ ಎಂದರು.
“ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಇಲ್ಲದಿದ್ದರೆ, ರಾಜ್ಯ ಸರ್ಕಾರವು ಎಲ್ಲಾ ಪುರಸಭೆಗಳನ್ನು ಪರೋಕ್ಷವಾಗಿ ಆಳುತ್ತಿತ್ತು ಮತ್ತು ಭ್ರಷ್ಟಾಚಾರ ಹಾಗೂ ಹಗರಣಗಳ ಮೂಲಕ ಅವುಗಳನ್ನು ಬಳಸಿಕೊಳ್ಳುತ್ತಿತ್ತು. ಇದನ್ನು ಈಗ ನಿಲ್ಲಿಸಬೇಕು. ಜನರು ಸ್ವಚ್ಛ ಮತ್ತು ನ್ಯಾಯಯುತ ಆಡಳಿತವನ್ನು ಬಯಸುತ್ತಾರೆ. ಈ ಭ್ರಷ್ಟ ಜನರನ್ನು ಹೊರಹಾಕಲು ಇದು ಸರಿಯಾದ ಸಮಯ” ಎಂದರು.
ಮಹಾರಾಷ್ಟ್ರವು ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ಚೆನ್ನಿತ್ತಲ ಆರೋಪಿಸಿದರು.
"ಪ್ರತಿಯೊಂದು ಯೋಜನೆ ಮತ್ತು ಅಭಿವೃದ್ಧಿಯಲ್ಲೂ ದೊಡ್ಡ ಭ್ರಷ್ಟಾಚಾರವಿದೆ. ಹಣ ನೀಡದೆ ಮಹಾರಾಷ್ಟ್ರದಲ್ಲಿ ಏನೂ ಕೆಲಸ ಆಗುವುದಿಲ್ಲ. ಇದು ಪ್ರಜಾಪ್ರಭುತ್ವದ ಅಣಕ ಮತ್ತು ಸಂವಿಧಾನದ ಅಪಮೌಲ್ಯೀಕರಣ. ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಅದೇ ತಂತ್ರಗಳನ್ನು ಬಳಸುತ್ತಾರೆ. ಆದರೆ ಮುಂಬೈ ಜನ ಬಿಜೆಪಿಯ ಭ್ರಷ್ಟಾಚಾರದ ಹಣವನ್ನು ತಿರಸ್ಕರಿಸುತ್ತಾರೆ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಆಡಳಿತ ಪಕ್ಷವು ಸುಲಿಗೆ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ಪದವನ್ನು ಈಗ ಸುಲಿಗೆ ಎಂದು ಬದಲಾಯಿಸಲಾಗಿದೆ” ಎಂದು ವಾಗ್ದಾಳಿ ನಡೆಸಿದರು.