ಅಹ್ಮದಾಬಾದ್: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನ ಸಹಾಯದಿಂದ ತನ್ನ ಹೆತ್ತ ತಂದೆಗೆ ನಿದ್ರೆ ಮಾತ್ರೆಗಳನ್ನು ನೀಡಿ, ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಪದ್ರಾ ತಾಲೂಕಿನ ವ್ಯಕ್ತಿಯೊಬ್ಬರ ಕೊಲೆಯನ್ನು ಪೊಲೀಸರು ಭೇದಿಸಿದ ನಂತರ ವಡೋದರಾ ನಗರವು ಬೆಚ್ಚಿಬಿದ್ದಿದೆ. ಆತನ ಸ್ವಂತ ಮನೆಯೊಳಗೆ ಇರಿದು ಕೊಲೆ ಮಾಡಲಾಗಿದೆ. ಆರಂಭದಲ್ಲಿ ಮೃತ ವ್ಯಕ್ತಿಯ ನಿವಾಸದ ಬಳಿ ನಡೆದ ನಿಗೂಢ, ರಕ್ತಸಿಕ್ತ ಕೊಲೆ ಎಂದು ತೋರುತ್ತಿತ್ತು. ನಂತರ ಆತನ ಸ್ವಂತ ಅಪ್ರಾಪ್ತ ಮಗಳೇ ತಂದೆಯ ಕೊಲೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಹುಡುಗಿಯ ಪ್ರೇಮಿ ರಂಜಿತ್ ಮತ್ತು ಆತನ ಸ್ನೇಹಿತ ಮಹೇಶ್ ಅವರ ಸಹಾಯದೊಂದಿಗೆ ಈ ಕೊಲೆ ನಡೆಸಲಾಗಿದೆ. ತಂದೆಗೆ ನಿದ್ದೆ ಮಾತ್ರೆ ನೀಡಿ, ಗಾಢ ನಿದ್ರೆಗೆ ಜಾರಿದ ನಂತರ ಕೊಲೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ರಾತ್ರಿ, ಅಪ್ರಾಪ್ತ ಬಾಲಕಿ ತನ್ನ ತಂದೆಯ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಾಳೆ. ತಂದೆ ಪ್ರಜ್ಞಾಹೀನ ಸ್ಥಿತಿಗೆ ಜಾರಿದ ನಂತರ, ರಂಜಿತ್ ಮತ್ತು ಆತನ ಸಹಚರರು ಬೆಳಗಿನ ಜಾವ 2.30 ರ ಸುಮಾರಿಗೆ ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಗೆ ಮೂರು ಬಾರಿ ಚಾಕುವಿನಿಂದ ಇರಿದು, ಸ್ಥಳದಿಂದ ಪರಾರಿಯಾಗಿದ್ದಾರೆ.
ಹುಡುಗಿ ಕಿಟಕಿಯಿಂದ ಹತ್ಯೆಯನ್ನು ವೀಕ್ಷಿಸುತ್ತಿದ್ದಳು ಮತ್ತು ತನ್ನ ಪ್ರೇಮಕ್ಕೆ "ಅಡ್ಡಿಯಾಗಿದ್ದ" ವ್ಯಕ್ತಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಳ್ಳುವುಕ್ಕಾಗಿ ಕಾಯುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
"ಇದು ಹಠಾತ್ ನಡೆದ ಕೃತ್ಯವಲ್ಲ. ಆ ಹುಡುಗಿ ಈ ಹಿಂದೆಯೂ ತನ್ನ ಹೆತ್ತವರಿಗೆ ವಿಷ ನೀಡಿ ಹತ್ಯೆ ಮಾಡಲು ಪ್ರಯತ್ನಿಸಿದ್ದಳು. ಕೊಲೆಗೆ ಎರಡು ದಿನಗಳ ಮೊದಲು, ಅವಳು ಮತ್ತೆ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಾಳೆ. ಇದಕ್ಕೂ ಮುಂಚೆ, ಅವಳು ತನ್ನ ತಾಯಿಗೆ ಒಂದು ಲೋಟ ನೀರಿಗೆ ನಿದ್ರೆ ಮಾತ್ರೆಗಳನ್ನು ಸೇರಿಸಿ ಕೊಡಲು ಪ್ರಯತ್ನಿಸಿದ್ದಳು. ಆದರೆ ತಾಯಿ ನೀರು ಕಹಿಯಾಗಿದೆ ಅಂತ ಕುಡಿದಿರಲಿಲ್ಲ" ಎಂದು ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಅಗರ್ವಾಲ್ ಅವರು ತಿಳಿಸಿದ್ದಾರೆ.
ಮೃತ ತಂದೆ ತನ್ನ ಮಗಳ ಪ್ರೇಮ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು ಮತ್ತು ಮಗಳನ್ನು ಕೋಣೆಯೊಳಗೆ ಬಂಧಿಸಿ, ಹೊರಗಿನಿಂದ ಬೀಗ ಹಾಕಿದ್ದರು. ಅಲ್ಲದೆ ಆರೋಪಿ ಪ್ರೇಮಿ ರಂಜಿತ್ ಈ ಹಿಂದೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದನು. ಇದರಿಂದಾಗಿ ತಂದೆ ರಂಜಿತ್ ವಿರುದ್ಧ ದೂರು ದಾಖಲಿಸಿದ್ದರು. ರಂಜಿತ್‌ನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.
"ಜಾಮೀನಿನ ಮೇಲೆ ಹೊರಬಂದ ನಂತರ, ಆರೋಪಿ ಮತ್ತೆ ಅಪ್ರಾಪ್ತ ಬಾಲಕಿಯೊಂದಿಗೆ ಸಂಪರ್ಕ ಸಾಧಿಸಿದನು ಮತ್ತು ಇಬ್ಬರೂ ಒಟ್ಟಾಗಿ ತಂದೆಯನ್ನು ಕೊಂದು ಓಡಿಹೋಗಲು ಯೋಜಿಸಿದರು" ಎಂದು ಎಸ್ಪಿ ತಿಳಿಸಿದ್ದಾರೆ.
ಪೊಲೀಸರು ಅಪ್ರಾಪ್ತ ಬಾಲಕಿ, ಆಕೆಯ ಪ್ರಿಯಕರ ರಂಜಿತ್ ಮತ್ತು ಆತನ ಸಹಚರ ಮಹೇಶ್ ನನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ನಿದ್ರೆ ಮಾತ್ರೆಗಳ ಮೂಲ ಮತ್ತು ಅಪರಾಧಕ್ಕೆ ಬಳಸಿದ ಚಾಕುವನ್ನು ಪತ್ತೆಹಚ್ಚಿದ್ದಾರೆ.