ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಭದ್ರತೆ ಭೀತಿ ಎದುರಿಸಿದ್ದಾರೆ. ಕಾರಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಬಿಡಾಡಿ ಹಸುವೊಂದು ದಾರಿ ತಪ್ಪಿ ಅವರಿಗೆ ಭದ್ರತಾ ಭೀತಿಯನ್ನುಂಟು ಮಾಡಿದೆ.
ಶುಕ್ರವಾರ ಸಂಜೆ ಆದಿತ್ಯನಾಥ್ ಅವರು ಗೋರಖ್ ನಾಥ್ ಮೇಲ್ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಇದರ ವಿಡಿಯೋ ಭಾನುವಾರ ವೈರಲ್ ಆದ ಬಳಿಕ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಮುನ್ಸಿಪಲ್ ಕಾರ್ಪೊರೇಷನ್ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.
ಸಂಸದ ರವಿ ಕಿಶನ್ ಮೊದಲು ಕಾರಿನಿಂದ ಇಳಿಯುವುದು ವಿಡಿಯೋದಲ್ಲಿ ಕಂಡುಬಂದಿದೆ. ತದನಂತರ ಹಸುವೊಂದು ಯೋಗಿ ಆದಿತ್ಯನಾಥ್ ಅವರ ಕಾರಿನ ಹತ್ತಿರ ಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಹರಸಾಹಸ ಮಾಡಿ ಹಸುವನ್ನು ಅಲ್ಲಿಂದ ಓಡಿಸಿ, ಯಾವುದೇ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ.
ನಂತರ, ಮುನ್ಸಿಪಲ್ ಕಮಿಷನರ್ ಗೌರವ್ ಸಿಂಗ್ ಸೊಗರವಾಲ್ ಭದ್ರತಾ ವೈಫಲ್ಯ ಕುರಿತು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಲ್ವಿಚಾರಕ ಅರವಿಂದ್ ಕುಮಾರ್ ಅವರ ನಿರ್ಲಕ್ಷ್ಯ ಕಂಡುಬಂದಿದ್ದು, ಅವರನ್ನು ಈಗ ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಆಗಾಗ್ಗೆ ಪ್ರಸ್ತಾಪಿಸುತ್ತಿರುತ್ತಾರೆ. ಈ ಹಿಂದೆ ಡಿಸೆಂಬರ್ 2 ರಂದು ಕೂಡಾ ಯೋಗಿ ಆದಿತ್ಯನಾಥ್ ಗೆ ಇದೇ ರೀತಿಯ ಭದ್ರತಾ ಲೋಪ ಉಂಟಾಗಿತ್ತು.
ವಾರಾಣಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮ ಕಾರ್ಯಕ್ರಮದ ವೇಳೆ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ,ಯೋಗಿ ಆದಿತ್ಯನಾಥ್ ಹಾಜರಾಗಿದ್ದ ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದ್ದರು.