ಉತ್ತರ ಪ್ರದೇಶದ ಅಮ್ರೋಹಾ ನಗರದ 11 ನೇ ತರಗತಿಯ ವಿದ್ಯಾರ್ಥಿನಿ ಅತಿಯಾದ ಫಾಸ್ಟ್ ಫುಡ್ ಸೇವನೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹಾನಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.
ದೀರ್ಘಕಾಲದ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಹಾನಾಳ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ತಂಡದ ಪ್ರಕಾರ, ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿದ್ದವು. ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ.
ಅಹಾನಾ ಬಾಲ್ಯದಿಂದಲೂ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ಇಷ್ಟಪಡುತ್ತಿದ್ದಳು. ಹೊರಗಿನ ಆಹಾರವನ್ನೇ ಹೆಚ್ಚು ಸೇವಿಸುತ್ತಿದ್ದಳು, ಮನೆಯ ಆಹಾರ ಆಕೆಗೆ ರುಚಿಸುತ್ತಿರಲಿಲ್ಲ. ಈ ಅಭ್ಯಾಸವು ಅಂತಿಮವಾಗಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ.
ಅಮ್ರೋಹಾದ ಅಫ್ಘಾನ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು, ಕುಟುಂಬ ಮತ್ತು ಸ್ಥಳೀಯ ನಿವಾಸಿಗಳನ್ನು ಆಘಾತಕ್ಕೆ ಈಡುಮಾಡಿದೆ.
ಫಾಸ್ಟ್ ಫುಡ್‌ನ ಅತಿಯಾದ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು, ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಗಂಭೀರವಾಗಿ ಹಾನಿಗೊಳಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ದುರಂತ ಘಟನೆಯು ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯಕರ ಆಹಾರ ಪದ್ಧತಿಗಳು ಮಾರಕ ಪರಿಣಾಮಗಳನ್ನು ಬೀರುತ್ತವೆ ಎಂಬುದಕ್ಕೆ ಎಚ್ಚರಿಕೆ ಗಂಟೆಯಾಗಿದೆ.
ಅಹಾನಾ ರೈತ ಮನ್ಸೂರ್ ಅಲಿ ಖಾನ್ ಅವರ ಪುತ್ರಿ. ಆಲಿ ಖಾನ್, ಪತ್ನಿ ಸಾರಾ ಖಾನ್, ಹಿರಿಯ ಮಗಳು ಮಾರಿಯಾ (23ವ), ಮಗ ಅವನ್ ಮತ್ತು ಅಹಾನಾ ಮಕ್ಕಳು.
ಆಗಿದ್ದೇನು?
ನವೆಂಬರ್ 28 ರಂದು ಅಹಾನಾ ತೀವ್ರ ಹೊಟ್ಟೆ ನೋವು ಎಂದು ಹೇಳಿದಾಗ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೊರದಾಬಾದ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದರು.
ಮೊರಾದಾಬಾದ್‌ನಲ್ಲಿ ವೈದ್ಯಕೀಯ ಪರೀಕ್ಷೆಗಳಲ್ಲಿ ಅವರ ಕರುಳಿಗೆ ಹಾನಿಯಾಗಿದೆ, ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿದೆ ಎಂದು ತಿಳಿದುಬಂತು. ಶಸ್ತ್ರಚಿಕಿತ್ಸಕ ಡಾ. ರಿಯಾಜ್ ಶಸ್ತ್ರಚಿಕಿತ್ಸೆ ನಡೆಸಿದರು, ಈ ಸಮಯದಲ್ಲಿ ಅವರ ಹೊಟ್ಟೆಯಿಂದ ಸುಮಾರು ಏಳು ಲೀಟರ್ ದ್ರವವನ್ನು ತೆಗೆದುಹಾಕಲಾಯಿತು. ಸ್ವಲ್ಪ ಸುಧಾರಣೆಯ ನಂತರ, ಅಹಾನಾ ಅವರನ್ನು ಅವರ ಚಿಕ್ಕಪ್ಪ ಸಾಜಿದ್ ಖಾನ್ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ದರು.
ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ
ಅಹಾನಾಳನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಅವರ ಕರುಳುಗಳು ಒಟ್ಟಿಗೆ ಅಂಟಿಕೊಂಡಿವೆ ಎಂದು ಪರೀಕ್ಷೆಯಿಂದ ಕಂಡುಕೊಂಡರು. ಚಿಕಿತ್ಸೆ ಮುಂದುವರೆಯಿತು, ಆದರೆ ಆಕೆಯ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಇತ್ತು. ಡಿಸೆಂಬರ್ 21 ರಂದು ತಡರಾತ್ರಿ, ಆರೋಗ್ಯ ತೀವ್ರವಾಗಿ ಹದಗೆಟ್ಟು ತೀವ್ರ ಹೃದಯಾಘಾತದಿಂದ ನಿಧನಳಾದಳು.
ಅತಿಯಾದ ಫಾಸ್ಟ್ ಫುಡ್ ಕಾರಣ
ಅಹನಾಳ ಚಿಕ್ಕಪ್ಪ ಗುಲ್ಜಾರ್ ಖಾನ್ ಅಲಿಯಾಸ್ ಗುಡ್ಡು ಅವರು ಹೇಳಿಕೆ ನೀಡಿ, ಹಲವು ವರ್ಷಗಳಿಂದ ಅಹನಾ ಫಾಸ್ಟ್ ಫುಡ್ ತಿನ್ನುತ್ತಿದ್ದಳು. ಆಕೆಯ ಕರುಳುಗಳು ತೀವ್ರವಾಗಿ ಹಾನಿಗೊಳಗಾಗಿವೆ, ಇದು ಆಕೆಯ ದೇಹವನ್ನು ಅತ್ಯಂತ ದುರ್ಬಲಗೊಳಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಅಮ್ರೋಹಾದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಪಿ. ಸಿಂಗ್, ಮಕ್ಕಳಿಗೆ ಅತಿಯಾಗಿ ಫಾಸ್ಟ್ ಫುಡ್ ಸೇವಿಸಲು ಅವಕಾಶ ನೀಡಬಾರದು. ಅಂತಹ ಆಹಾರವು ಅತಿಯಾದ ಮಸಾಲೆಗಳು, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ತಂಪು ಪಾನೀಯಗಳು, ಚಿಪ್ಸ್ ಮತ್ತು ಫ್ರೆಂಚ್ ಫ್ರೈಗಳು ನೈಸರ್ಗಿಕ ಹಸಿವನ್ನು ನಿಗ್ರಹಿಸುತ್ತವೆ, ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳಿದರು.
ಅಹನಾ ಬಾಲ್ಯದಿಂದಲೂ ಫಾಸ್ಟ್ ಫುಡ್ ನ್ನು ಇಷ್ಟಪಡುತ್ತಿದ್ದಳು ಎಂದು ಚಿಕ್ಕಪ್ಪ ಸಾಜಿದ್ ಖಾನ್ ಹೇಳುತ್ತಾರೆ. ಅವಳು ಮನೆಯಲ್ಲಿ ಬೇಯಿಸಿದ ಆಹಾರಕ್ಕಿಂತ ಚೌಮಿನ್, ಮ್ಯಾಗಿ, ಪಿಜ್ಜಾ ಮತ್ತು ಬರ್ಗರ್‌ಗಳನ್ನು ಇಷ್ಟಪಡುತ್ತಿದ್ದಳು. ಅವಳು ಪ್ಯಾಕ್ ಮಾಡಿದ ವಸ್ತುಗಳನ್ನು ಸಹ ಹೆಚ್ಚು ಖರೀದಿಸಿ ತಿನ್ನುತ್ತಿದ್ದಳು. ನಾವು ಅಸಡ್ಡೆ ಮಾಡಿದ್ದು ತಪ್ಪು ಎನ್ನುತ್ತಾರೆ.
ಫಾಸ್ಟ್ ಫುಡ್ ಆರೋಗ್ಯಕ್ಕೆ ಅಪಾಯಕಾರಿ
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ರಿಪೋರ್ಟ್ ಪ್ರಕಾರ, ಫಾಸ್ಟ್ ಫುಡ್ ಸೇವನೆ ಸೇರಿದಂತೆ ಅನಾರೋಗ್ಯಕರ ಆಹಾರಕ್ರಮಗಳು ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 11 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತವೆ. JAMA ನೆಟ್‌ವರ್ಕ್ ಮತ್ತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಂತಹ ಜರ್ನಲ್‌ಗಳಲ್ಲಿ ಪ್ರಕಟವಾದ ವೈದ್ಯಕೀಯ ಅಧ್ಯಯನಗಳು ಫಾಸ್ಟ್ ಫುಡ್ ಹೃದ್ರೋಗ, ಕ್ಯಾನ್ಸರ್, ಜೀರ್ಣಕಾರಿ ಅಸ್ವಸ್ಥತೆಗಳು ಮತ್ತು ಕರುಳಿನ ಆರೋಗ್ಯಕ್ಕೆ ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತದೆ ಎಂದು ಕಂಡುಹಿಡಿದಿದೆ.