ನವದೆಹಲಿ: ಕ್ರಿಸ್‌ಮಸ್ ಹಬ್ಬ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ 'ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್'ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲ ಪೋಸ್ಟ್ ಮಾಡಿರುವ ಮೋದಿಯವರು, ದೆಹಲಿಯಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಷನ್‌ನಲ್ಲಿ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಮಸ್‌ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಪ್ರೇರೇಪಿಸಲಿ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮೋದಿಯವರು, ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದರು. ಯೇಸುಕ್ರಿಸ್ತರ ಶಾಂತಿ, ಪ್ರೀತಿ ಮತ್ತು ಕರುಣೆಯ ಸಂದೇಶವು ಸಮಾಜದಲ್ಲಿ ಸೌಹಾರ್ದತೆಯನ್ನು ಹೆಚ್ಚಿಸಲಿ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಹೇಳಿದ್ದರು.
ಇದರಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೂ ಕೂಡ ದೇಶದ ಜನತೆಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಇನ್ನು ಚರ್ಚ್ ನಲ್ಲಿ ದೆಹಲಿಯ ಬಿಷಪ್ ಡಾ. ಪೌಲ್ ಸ್ವರೂಪ್ ನೇತೃತ್ವದಲ್ಲಿ ಪ್ರಾರ್ಥನೆಗಳು ನಡೆದಿದ್ದು, ಇದೇ ವೇಳೆ ಪ್ರಾರ್ಥನೆಗಳು, ಕರೊಲ್‌ಗಳು, ಸ್ತುತಿಗೀತೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ವಿಶೇಷ ಪ್ರಾರ್ಥನೆ ನಡೆದವು.