ಹೈದರಾಬಾದ್ : ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ ಹಚ್ಚಿದ್ದಲ್ಲದೆ ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಪತಿ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದಾರೆ. ಮಗಳನ್ನು ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ.
ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ನಗರದ ನಲ್ಲಕುಂಟಾ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ. ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ಪಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 24 ರಂದು, ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಅವರ ಕಿರುಚಾಟ ಕೇಳಿ ನೆರೆಹೊರೆಯವರು ಅವರ ಮನೆಗೆ ಓಡೋಡಿ ಬಂದಿದ್ದರು . ಆ ಹೊತ್ತಿಗೆ, ತೀವ್ರವಾದ ಸುಟ್ಟ ಗಾಯಗಳಿಂದ ತ್ರಿವೇಣಿ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಲ್ಲಿ ಪಾರಾದ ಅವರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವೆಂಕಟೇಶ್ ನನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.