ಕೋಲ್ಕತ್ತಾ: ಎಸ್‌ಐಆರ್ ಎನ್ನುವುದು ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ನಡೆಸಲಾಗುತ್ತಿರುವ ದೊಡ್ಡ 'ಹಗರಣ' ಎಂದು ದೂರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೂ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಟಿಎಂಸಿ ಮುತ್ತಿಗೆ ಹಾಕಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಬಂಕುರಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಐಆರ್ ಹೆಸರಿನಲ್ಲಿ ರಾಜ್ಯದ ಜನರನ್ನು 'ಹಿಂಸಿಸಲಾಗುತ್ತಿದೆ' ಎಂದು ಹೇಳಿದರು.
'SIR ನಿಂದ ಸುಮಾರು 60 ಜನರು ಸಾವಿಗೀಡಾಗಿದ್ದಾರೆ. ದಾಖಲೆ ಪರಿಶೀಲನೆ ವಿಚಾರಣೆಗೆ ವೃದ್ಧರನ್ನು ಕರೆಯಲಾಗುತ್ತಿದೆ. ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೂ ಸಹ, ಟಿಎಂಸಿ ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುತ್ತದೆ' ಎಂದು ಅವರು ಹೇಳಿದರು.
ರಾಜ್ಯದ ಜನರು ಇಂತಹ 'ಕಿರುಕುಳ'ವನ್ನು ಸಹಿಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನರು ಬಿಡುವುದಿಲ್ಲ ಎಂದು ಅವರು ಹೇಳಿದರು.
ಚುನಾವಣೆಗಳು ಬಂದಾಗಲೆಲ್ಲಾ 'ಸೋನಾರ್ ಬಾಂಗ್ಲಾ' ನಿರ್ಮಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದರೂ, ವಾಸ್ತವದಲ್ಲಿ, ಅದು ಆಳುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರನ್ನು ಥಳಿಸಲಾಗುತ್ತದೆ' ಎಂದು ಬ್ಯಾನರ್ಜಿ ಹೇಳಿದರು.