ಹೈದರಾಬಾದ್: ಹಿಂದೂ ದೇವತೆಗಳ ಕುರಿತು ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಖ್ಯಾತ ತೆಲುಗು ಯೂಟ್ಯೂಬರ್ ಅನ್ವೇಶ್ (ನಾ ಅನ್ವೇಷಣ) ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
ಪ್ರಪಂಚ ಯಾತ್ರಿಕುಡು (ಪ್ರಪಂಚ ಯಾತ್ರಿ) ಎಂದೇ ಜನಪ್ರಿಯರಾಗಿರುವ ಅನ್ವೇಶ್ ಅವರು ಹಿಂದೂ ದೇವರುಗಳನ್ನು "ಅವಮಾನಿಸಿದ್ದಾರೆ" ಎಂದು ಆರೋಪಿಸಿ ನಟಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕಿ ಕರಾಟೆ ಕಲ್ಯಾಣಿ ಹೈದರಾಬಾದ್ ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನ್ವೇಷ್ ಅವರು ಆಕ್ಷೇಪಾರ್ಹ ವಿಷಯವನ್ನು ಹರಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಇದರ ಪರಿಣಾಮವಾಗಿ, ಪೊಲೀಸರು ಅನ್ವೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಖಮ್ಮಂನ ಖಾನಾಪುರಂ ಹವೇಲಿ ಪೊಲೀಸ್ ಠಾಣೆಯಲ್ಲಿ ಅನ್ವೇಶ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.
ಇನ್ಸ್‌ಪೆಕ್ಟರ್ ಭಾನುಪ್ರಕಾಶ್ ಅವರ ಪ್ರಕಾರ, ವಿಶಾಖಪಟ್ಟಣದ ಅನ್ವೇಶ್ ಎಂಬ ಯುವಕ ವಿದೇಶದಲ್ಲಿ ವಾಸಿಸುತ್ತಿದ್ದು, ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ.
ಇತ್ತೀಚೆಗೆ ಅವರು ಹಿಂದೂಗಳು ಪೂಜಿಸುವ ಸೀತಾ ದೇವಿ ಮತ್ತು ದ್ರೌಪದಿ ದೇವಿಯ ಬಗ್ಗೆ ಅಸಭ್ಯವಾಗಿ ವೀಡಿಯೊ ಬಿಡುಗಡೆ ಮಾಡಿದ್ದು, ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ದಾನವಾಯುಗುದೇಣಿಯ ಜಿ. ಸತ್ಯನಾರಾಯಣ ರಾವ್ ಎಂಬ ವ್ಯಕ್ತಿ ಭಾನುವಾರ ರಾತ್ರಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ವಿವರಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ ಗಳ ವಿರುದ್ಧ ಧನಿ ಎತ್ತಿದ್ದ ಅನ್ವೇಷ್
ಈ ಹಿಂದೆ ಇದೇ ಯೂಟ್ಯೂಬರ್ ಅನ್ವೇಷ್ ಬೆಟ್ಟಿಂಗ್ ಆ್ಯಪ್ ಗಳ ವಿರುದ್ಧ ಧನಿ ಎತ್ತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸ್ವತಃ ಹೈದರಾಬಾದ್ ಪೊಲೀಸ್ ಆಯುಕ್ತರೇ ಈ ಸಂಬಂಧ ಅನ್ವೇಷ್ ಕಾರ್ಯವನ್ನು ಶ್ಲಾಘಿಸಿದ್ದರು.
ನಟಿ ಶಿವಾಜಿ ವಿಚಾರವಾಗಿ ನಾಲಿಗೆ ಹರಿಬಿಟ್ಟ ಅನ್ವೇಷ್
ಇನ್ನು ಇತ್ತೀಚೆಗೆ ತೆಲುಗು ನಟ ಶಿವಾಜಿ ಹೀರೋಯಿನ್ ಗಳ ಉಡುಗೆ ಕುರಿತು ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ಇದೇ ವಿಚಾರವಾಗಿ ವಿಡಿಯೋ ಮಾಡಿದ್ದ ಅನ್ವೇಷ್ ನಟ ಶಿವಾಜಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ. ಮಾತ್ರವಲ್ಲದೇ ಮಹಿಳೆಯರು ತಮಗೆ ಇಚ್ಚಿಸಿದ ವಸ್ತ್ರ ಧರಿಸುತ್ತಾರೆ. ಇದನ್ನು ಕೇಳಲೂ ಯಾರಿಗೂ ಅಧಿಕಾರವಿಲ್ಲ ಎಂದು ಕಿಡಿಕಾರಿದ್ದ.
ಮಾತ್ರವಲ್ಲದೇ ಹಿಂದೂ ದೇವತೆಗಳ ಕುರಿತೂ ಅಪಮಾನಕಾರಿ ಹೇಳಿಕೆಗಳನ್ನು ನೀಡಿ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ.