ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಸೋಲಿನತ್ತ ಮುಖ ಮಾಡಿದ್ದು, ಬಿಜೆಪಿ ಭಾರಿ ಅಂತರದ ಗೆಲುವಿನತ್ತ ದಾಪುಗಾಲಿರಿಸಿದೆ.
ಈ ವರೆಗಿನ ಫಲಿತಾಂಶಗಳ ಅನ್ವಯ ಒಟ್ಟು 70ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ಫಲಿತಾಂಶದ ಕುರಿತು ಮಾತನಾಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಗೌರವ್ ಭಾಟಿಯಾ, ಬಿಜೆಪಿ ಮೇಲೆ ಅಪಾರ ನಂಬಿಕೆ ಇರಿಸಿ ಮತ ನೀಡಿರುವ ದೆಹಲಿ ಜನತೆಗೆ ಧನ್ಯವಾದ ಹೇಳಿದರು.
'ಬಿಜೆಪಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿರುವ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮತದಾರರಿಂದ ಬಂದ "ಸ್ಪಷ್ಟ ಸಂದೇಶ" ಜನತೆಗೆ ಬೇಕಾದ್ದನ್ನು ಎತ್ತಿ ತೋರಿಸುತ್ತಿದೆ. ದೆಹಲಿಯ ಜನರು "ಡಬಲ್ ಎಂಜಿನ್ ಸರ್ಕಾರ" ಬಯಸುತ್ತಿದ್ದಾರೆಯೇ ಹೊರತು, "ಎಂಜಿನ್ ಇಲ್ಲದ ವ್ಯಾಗನ್ ಆರ್" ಬೇಕಿಲ್ಲ ಎಂದು ಹೇಳಿದರು.
ಅಂತೆಯೇ "ನಾವು ಫಲಿತಾಂಶಕ್ಕಾಗಿ ಕಾಯಬೇಕು. ನಾವು ಸಾರ್ವಜನಿಕರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಜನರೇ 'ಜನಾರ್ದನರು' ಮತ್ತು ಸಾರ್ವಜನಿಕರಿಂದ ಸ್ಪಷ್ಟವಾದ ಬಲವಾದ ಸಂದೇಶವನ್ನು ನೀಡಲಾಗಿದೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ವ್ಯಾಗನ್ ಆರ್ ಓಡಿಸುತ್ತಿದ್ದರು. ಆದರೆ ಈಗ ಅವರಿಗೆ ಐಷಾರಾಮಿ ಕಾರು ಬೇಕಿದೆ. ಹೀಗಾಗಿ ಅವರು ಬದಲಿಸಿದರು. ಜನರೂ ಕೂಡ ಬದಲಾವಣೆ ಮಾಡಿದ್ದಾರೆ. ಆ ಮೂಲಕ ತಮಗೇನು ಬೇಕು ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು.
ಅಲ್ಲದೆ ಕೇಜ್ರಿವಾಲ್ ಅವರ "ನಕಾರಾತ್ಮಕ ರಾಜಕೀಯ"ವನ್ನು ಟೀಕಿಸಿದ ಭಾಟಿಯಾ, 'ದೆಹಲಿಯಲ್ಲಿ ನಕಾರಾತ್ಮಕ ರಾಜಕೀಯ ಅಂತ್ಯವಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಕಣ್ಣು ತೆರೆಸುವ ಕೆಲಸವನ್ನು ಸಾರ್ವಜನಿಕರು ಮಾಡಿದ್ದಾರೆ. ಅವರು ಇವಿಎಂ ಅನ್ನು ದೂಷಿಸಿದರು ಮತ್ತು ಪೊಲೀಸರು ಮತ್ತು ಭಾರತೀಯ ಚುನಾವಣಾ ಆಯೋಗವನ್ನು ಕೆಟ್ಟದಾಗಿ ಜರಿದರು. ಈ ರೀತಿಯ ನಕಾರಾತ್ಮಕ ರಾಜಕೀಯವು ಇದೀಗ ಕೊನೆಗೊಳ್ಳುತ್ತಿದೆ ಮತ್ತು ಫಲಿತಾಂಶಗಳು ಬಂದಾಗ ಭಾರತೀಯ ಜನತಾ ಪಕ್ಷ ಗೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ. ಬಿಜೆಪಿ ಜನರ ಸೇವೆ ಮಾಡಲು ಸಿದ್ಧವಾಗಿದೆ" ಎಂದು ಭಾಟಿಯಾ ಹೇಳಿದರು.