ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ "ಹಿನ್ನಡೆ"ಯಾಗಿದೆ ಎಂದು ಒಪ್ಪಿಕೊಂಡ ದೆಹಲಿ ನಿರ್ಗಮಿತ ಮುಖ್ಯಮಂತ್ರಿ ಅತಿಶಿ ಅವರು, ಮೂರು ದಶಕಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷ(ಬಿಜೆಪಿ) ವಿರುದ್ಧ "ಯುದ್ಧ" ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕಲ್ಕಾಜಿ ಸ್ಥಾನವನ್ನು ಉಳಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, ತಮ್ಮ ಕ್ಷೇತ್ರದ ಜನರು ತಮ್ಮ ಮೇಲೆ "ವಿಶ್ವಾಸವಿಟ್ಟಿದ್ದಕ್ಕಾಗಿ" ಧನ್ಯವಾದ ಅರ್ಪಿಸಿದರು.
"ನಾವು ಜನರ ಆದೇಶವನ್ನು ಒಪ್ಪಿಕೊಳ್ಳುತ್ತೇವೆ. ನಾನು ಗೆದ್ದಿದ್ದೇನೆ. ಆದರೆ ಇದು ಸಂಭ್ರಮಿಸುವ ಸಮಯವಲ್ಲ. ಬಿಜೆಪಿ ಸರ್ವಾಧಿಕಾರದ ವಿರುದ್ಧ 'ಯುದ್ಧ' ಮುಂದುವರಿಸುವ ಸಮಯ" ಎಂದರು.
ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿ ಉನ್ನತ ನಾಯಕರ ಆಘಾತಕಾರಿ ಸೋಲುಗಳ ಹೊರತಾಗಿಯೂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.