ನವದೆಹಲಿ: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪತ್ನಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.
2015 ರಲ್ಲಿ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತು ಚರ್ಚಿಸಲು ಮೊದಲ ಅವಧಿಯ ಸಂಸತ್ ಸದಸ್ಯ ಮತ್ತು ಅವರ ಸ್ಟಾರ್ಟ್ ಅಪ್ ಕಂಪನಿಯನ್ನು ಆಗಿನ ಪಾಕಿಸ್ತಾನಿ ಹೈಕಮಿಷನರ್ ಆಹ್ವಾನ ನೀಡಿದ್ದರು ಎಂದು ಹೇಳಿದ್ದಾರೆ
ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್‌ಬೋರ್ನ್ ಅವರು ಪಾಕಿಸ್ತಾನದ ಯೋಜನಾ ಆಯೋಗದ ಮಾಜಿ ಸಲಹೆಗಾರರಾದ ಅಲಿ ತೌಕೀರ್ ಶೇಖ್ ಅವರ ಅಡಿಯಲ್ಲಿ ಇಸ್ಲಾಮಾಬಾದ್‌ನಲ್ಲಿ ಹವಾಮಾನ ಮತ್ತು ಜ್ಞಾನ ಅಭಿವೃದ್ಧಿ ಜಾಲದೊಂದಿಗೆ ಕೆಲಸ ಮಾಡುತ್ತಿದ್ದಾಗ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಬುಧವಾರ ಆರೋಪಿಸಿದ್ದಾರೆ. ಶ್ರೀಮತಿ ಕೋಲ್‌ಬೋರ್ನ್ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಅತ್ಯಂತ ಕಳವಳಕಾರಿ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗೊಗೊಯ್ ಬಳಿ ಸ್ಪಷ್ಟೀಕರಣ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಗೊಗೊಯ್ ಅವರ ಪತ್ನಿ ವಿದೇಶಿ ಪ್ರಜೆಯಾಗಿದ್ದಾರೆ. ಅವರು ಕೆಲಸ ಮಾಡುವ ಸಂಸ್ಥೆಗೆ ಭಾರತ ವಿರೋಧ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಹಣಕಾಸು ನೆರವು ನೀಡಿದ್ದಾರೆ. ಹೀಗಾಗಿ, ಈ ಪ್ರಶ್ನೆ ಉದ್ಭವಿಸಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಂಸದ ಗೌರವ್ ಗೊಗೊಯ್ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ ಎಂದು ಹೇಳಿದ್ದಾರೆ.
ಕುಟುಂಬಸ್ಥರೇ ಪಾಕಿಸ್ತಾನದ ಜೊತೆಗೆ ನಂಟು ಹೊಂದಿರುವ ಕಾರಣ, ಗೊಗೊಯ್ ಅವರು ದೇಶದ ಭದ್ರತೆ ದೃಷ್ಟಿಯಿಂದ ಉಪನಾಯಕನ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವೇ?. ರಾಹುಲ್ ಗಾಂಧಿ ಇತ್ತೀಚೆಗೆ ಭಾರತದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದರು. ಗೊಗೊಯ್ ಮತ್ತು ಅವರ ಪತ್ನಿಯ ನೆರವಿನಿಂದ ತಮ್ಮ ಹೋರಾಟ ರೂಪಿಸಲಿದ್ದಾರೆಯೇ ಎಂದು ಗೌರವ್ ಭಾಟಿಯಾ ಪ್ರಶ್ನಿಸಿದ್ದಾರೆ.
ತಮ್ಮ ಪತ್ನಿ ವಿರುದ್ಧ ಬಿಜೆಪಿ ಮಾಡಿರುವ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ಗೊಗೊಯ್ ನಿರಾಕರಿಸಿದ್ದಾರೆ. ಇದೊಂದು ನಗೆಪಾಟಲಿಗೆ ಈಡಾಗುವ ಮತ್ತು ಮನರಂಜನೆ ನೀಡುವಂತಿದೆ. ಬಿಜೆಪಿ ನನ್ನನ್ನು ಎದುರಿಸಲಾಗದೆ ಕುಟುಂಬದ ಮೇಲೆ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮೊದಲು ನನ್ನ ಮತ್ತು ಕುಟುಂಬದ ವಿರುದ್ಧ ಇದೇ ರೀತಿಯ ಅಪಪ್ರಚಾರ ನಡೆಸಲಾಗಿತ್ತು. ಆದರೆ, ಜನರು ನನ್ನನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಸರಿಯಾದ ಉತ್ತರ ನೀಡಿದರು. ತಮ್ಮ ಕುಟುಂಬದ ಮೇಲಿನ ಆರೋಪಗಳೆಲ್ಲವೂ ನಿರಾಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.