ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ನಟ ಬೆಂಗಳೂರಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಭಾನುವಾರ ಮುಂಜಾನೆ ವಾಲಾಜಪೇಟೆ ಟೋಲ್ ಪ್ಲಾಜಾ ಬಳಿ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ವಾಹನವು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಯೋಗಿ ಬಾಬು ಅವರ ವಾಹನ ಕಂಟ್ರೋಲ್ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ಕಾರು ಅಪಘಾತ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿವೆ.
ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ನಟ ಅಪಾಯದಿಂದ ಪಾರು
ಅಪಘಾತದಲ್ಲಿ ನಟ ಯೋಗಿ ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಯೋಗಿ ಬಾಬು ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸ್ಪಷ್ಟನೆ ನೀಡಿದ ನಟ
ಇನ್ನು ಈ ಬಗ್ಗೆ ಸ್ವತಃ ನಟ ಯೋಗಿಬಾಬು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದು, 'ಯಾವುದೇ ವಂದಂತಿಗಳನ್ನು ನಂಬಬೇಡಿ. ನಾನು ಕ್ಷೇಮವಾಗಿದ್ದೇನೆ ಎಂದು ತಿಳಿಸಿದ್ದಾರೆ.
'ಅದು ಯಾವುದೋ ಕಂಪನಿ ಕಾರು. ಬ್ಯಾರಿಕೇಡ್‌ಗೆ ಚೂರು ತಾಗಿ ಘಟನೆ ನಡೆದಿದೆ ಅಷ್ಟೇ. ಎಲ್ಲರೂ ಕ್ಷೇಮವಾಗಿದ್ದೇವೆ, ಯಾರಿಗೂ ಯಾವುದೇ ಅನಾಹುತ ನಡೆದಿಲ್ಲ. ನಾನು ಅಲ್ಲಿ ಏನಾಗಿದೆ ಎಂಬುದನ್ನು ನೋಡಿ ಕೊನೆಗೆ ಎಲ್ಲರನ್ನೂ ಅಲ್ಲಿಂದ ಕಳಿಸಿಕೊಟ್ಟೆವು. ಸುಮ್ಮನೆ ಈ ಬಗ್ಗೆ ಏನೇನೋ ವದಂತಿಗಳು ಹಬ್ಬುತ್ತಿದೆ. ಅದೆಲ್ಲವೂ ಸುಳ್ಳು, ದಯವಿಟ್ಟು ಯಾರೂ ವದಂತಿಗಳನ್ನು ನಂಬಬೇಡಿ" ಎಂದು ಯೋಗಿ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.