ನವದೆಹಲಿ: ಕಳೆದ ವರ್ಷ 2024ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿಯು ದಿಢೀರ್ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತಗಳಿಂದ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ಕೇಂದ್ರದ ಹೆಚ್ಚುವರಿ ನೆರವಿನ 1554.99 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ.
ಒಟ್ಟು 1,554.99 ಕೋಟಿ ರೂಪಾಯಿಗಳಲ್ಲಿ ಆಂಧ್ರ ಪ್ರದೇಶಕ್ಕೆ 608.08 ಕೋಟಿ ರೂಪಾಯಿ, ನಾಗಾಲ್ಯಾಂಡ್‌ಗೆ 170.99 ಕೋಟಿ ರೂಪಾಯಿ, ಒಡಿಶಾಗೆ 255.24 ಕೋಟಿ ರೂಪಾಯಿ, ತೆಲಂಗಾಣಕ್ಕೆ 231.75 ಕೋಟಿ ರೂಪಾಯಿ ಮತ್ತು ತ್ರಿಪುರಕ್ಕೆ 288.93 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪ್ರಾಕೃತಿಕ ವಿಪತ್ತು ಪೀಡಿತ ಜನರ ಪರವಾಗಿ ಮೋದಿ ಸರ್ಕಾರ ನಿಂತಿದೆ. ಇಂದು, ಗೃಹ ಸಚಿವಾಲಯವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಆಂಧ್ರ ಪ್ರದೇಶ, ನಾಗಾಲ್ಯಾಂಡ್, ಒಡಿಶಾ, ತೆಲಂಗಾಣ ಮತ್ತು ತ್ರಿಪುರಾಗಳಿಗೆ 1,554 ಕೋಟಿ ರೂಪಾಯಿ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ. 99 ಕೋಟಿ ರೂಪಾಯಿಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ 27 ರಾಜ್ಯಗಳಿಗೆ ಕೇಂದ್ರ ಬಿಡುಗಡೆ ಮಾಡಿದ 18,322.80 ಕೋಟಿ ರೂಪಾಯಿ ಜೊತೆಗೆ ಇದು ಕೂಡ ಸೇರಿದೆ ಎಂದು ಅಮಿತ್ ಶಾ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಉನ್ನತ ಮಟ್ಟದ ಸಮಿತಿಯು ಎನ್ ಡಿಆರ್ ಎಫ್ ನಿಂದ ಐದು ರಾಜ್ಯಗಳಿಗೆ 1554.99 ಕೋಟಿ ರೂಪಾಯಿಗಳ ಕೇಂದ್ರ ನೆರವನ್ನು ಅನುಮೋದಿಸಿದೆ, ಇದು ಎಸ್ ಡಿಆರ್ ಎಫ್ ನಲ್ಲಿ ಲಭ್ಯವಿರುವ ವರ್ಷದ ಆರಂಭಿಕ ಬಾಕಿಯ ಶೇಕಡಾ 50 ರಷ್ಟು ಹೊಂದಾಣಿಕೆಗೆ ಒಳಪಟ್ಟಿರುತ್ತದೆ. ಈ ಹೆಚ್ಚುವರಿ ನೆರವು ಕೇಂದ್ರವು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ (SDRF) ರಾಜ್ಯಗಳಿಗೆ ಬಿಡುಗಡೆ ಮಾಡಿದ ನಿಧಿಗಿಂತ ಹೆಚ್ಚಾಗಿದೆ, ಇದನ್ನು ಈಗಾಗಲೇ ರಾಜ್ಯಗಳ ವಿಲೇವಾರಿಯಲ್ಲಿ ಇರಿಸಲಾಗಿದೆ.
2024-25ರ ಆರ್ಥಿಕ ವರ್ಷದಲ್ಲಿ, ಕೇಂದ್ರವು ಎಸ್ ಡಿಆರ್ ಎಫ್ ನಲ್ಲಿ 27 ರಾಜ್ಯಗಳಿಗೆ 18,322.80 ಕೋಟಿ ರೂಪಾಯಿಗಳನ್ನು ಮತ್ತು ಎನ್ ಡಿಆರ್ ಎಫ್ ನಿಂದ 18 ರಾಜ್ಯಗಳಿಗೆ 4,808.30 ಕೋಟಿ ರೂಪಾಯಿಗಳನ್ನು, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (SDMF) 14 ರಾಜ್ಯಗಳಿಗೆ 2208.55 ಕೋಟಿ ರೂಪಾಯಿಗಳನ್ನು ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (NDMF) ಎಂಟು ರಾಜ್ಯಗಳಿಗೆ 719.72 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ವಿಪತ್ತುಗಳು ಸಂಭವಿಸಿದ ತಕ್ಷಣ, ಔಪಚಾರಿಕ ಜ್ಞಾಪಕ ಪತ್ರಗಳ ಸ್ವೀಕೃತಿಗಾಗಿ ಕಾಯದೆ, ಕೇಂದ್ರವು ಅಂತರ-ಸಚಿವಾಲಯ ಕೇಂದ್ರ ತಂಡಗಳನ್ನು (IMCTs) ಈ ರಾಜ್ಯಗಳಿಗೆ ನಿಯೋಜಿಸಿದೆ.
ಕೇರಳದ ವಯನಾಡ್ ಗೆ ಇಲ್ಲ ನೆರವು
ಈ ಮಧ್ಯೆ, ಕಳೆದ ವರ್ಷ ಜುಲೈ ತಿಂಗಳಲ್ಲಿ ವಯನಾಡ್ ಜಿಲ್ಲೆಯ ಮುಂಡಕ್ಕೈ-ಚೂರಲ್ಮಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 400 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ನೂರಾರು ಜನರನ್ನು ಸ್ಥಳಾಂತರಿಸಲಾಗಿತ್ತು. ಆದರೆ ಕೇಂದ್ರದ ನೆರವಿನ ಪಟ್ಟಿಯಲ್ಲಿ ಕೇರಳದ ವಯನಾಡ್ ಹೆಸರು ಇಲ್ಲ.
ವಯನಾಡ್ ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರವು ಅನುದಾನವನ್ನು ನೀಡಲು ನಿರಾಕರಿಸಿದೆ, ಬದಲಾಗಿ, ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಸಹಾಯ ಯೋಜನೆ (SASCI) ಅಡಿಯಲ್ಲಿ ಕೇರಳ ಸರ್ಕಾರಕ್ಕೆ 529.50 ಕೋಟಿ ರೂ ಬಡ್ಡಿರಹಿತ ಸಾಲವನ್ನು ಮಂಜೂರು ಮಾಡಿದೆ.