ಮಹಾಕುಂಭ ಮೇಳದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋ ಡೌನ್ ಲೋಡ್, ಅಥವಾ ಅಪ್ ಲೋಡ್ ಮಾಡಿದರೆ ಅಂಥವರನ್ನು ಬಂಧಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರು ಸ್ನಾನ ಮಾಡುತ್ತಿರುವ, ಬಟ್ಟೆ ಬದಲಿಸುತ್ತಿರುವ ವಿಡಿಯೋಗಳನ್ನು ಅಪ್ ಲೋಡ್/ ಡೌನ್ ಲೋಡ್ ಮಾಡಿದ್ದಕ್ಕೆ ಸಂಬಂಧಿಸಿದಂತೆ 103 ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವೀಡಿಯೊಗಳನ್ನು ಕೆಲವು ವೇದಿಕೆಗಳು ಅಪ್‌ಲೋಡ್ ಮಾಡುತ್ತಿರುವುದು ಉತ್ತರ ಪ್ರದೇಶದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಪತ್ತೆಹಚ್ಚಿದ್ದು, ವಿಡಿಯೋಗಳು ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯಲಿದ್ದು, ಲಕ್ಷಾಂತರ ಹಿಂದೂ ಭಕ್ತರು ಪ್ರಯಾಗ್‌ರಾಜ್ ನಗರಕ್ಕೆ ಭೇಟಿ ನೀಡುತ್ತಾರೆ. ಆರು ವಾರಗಳ ಕುಂಭಮೇಳ ಪ್ರಮುಖ ಹಿಂದೂ ಧಾರ್ಮಿಕ ಸಭೆಯಾಗಿದ್ದು, ಕಳೆದ ತಿಂಗಳು ಪ್ರಾರಂಭವಾದಾಗಿನಿಂದ ಸುಮಾರು 50 ಕೋಟಿಗೂ ಹೆಚ್ಚಿನ ಭಕ್ತರು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕುಂಭಮೇಳಕ್ಕೆ ಸಂಬಂಧಿಸಿದಂತೆ ನಿನ್ನೆ, ಕೆಲವು ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು, ಕೆಲವು ಗುಂಪುಗಳು ರಚನೆಯಾಗಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ನಮಗೆ ತಿಳಿದುಬಂದಿತು. ನಾವು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಅಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಎಲ್ಲ ಜನರನ್ನು ಗುರುತಿಸಲಾಗುತ್ತಿದೆ. ಇವು ಕ್ರಿಮಿನಲ್ ಅಪರಾಧಗಳು. ಇದು ಐಟಿ ಕಾಯ್ದೆಯಡಿ ಅಪರಾಧವಾಗಿದೆ" ಎಂದು ಮಹಾ ಕುಂಭ ಡೆಪ್ಯೂಟಿ ಇನ್ಸ್‌ಪೆಕ್ಟರ್ ಇನ್ ಜನರಲ್ (ಡಿಐಜಿ) ವೈಭವ್ ಕೃಷ್ಣ ತಿಳಿಸಿದ್ದಾರೆ.
ನಮ್ಮ ಸಾಮಾಜಿಕ ಮಾಧ್ಯಮ ತಂಡವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಂತಹ ವಿಷಯವನ್ನು ಅಪ್‌ಲೋಡ್ ಮಾಡುತ್ತಿರುವ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ವೈಭವ್ ಕೃಷ್ಣ ತಿಳಿಸಿದ್ದಾರೆ.
ಇಲ್ಲಿಯವರೆಗೆ ಅಂತಹ ಎಷ್ಟು ಗುಂಪುಗಳು ಅಥವಾ ಜನರನ್ನು ಗುರುತಿಸಲಾಗಿದೆ ಎಂದು ಕೇಳಿದಾಗ, ಕೆಲವು ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉನ್ನತ ಅಧಿಕಾರಿ ಹೇಳಿದರು.
"ನಾವು ನಿನ್ನೆ ಎಫ್‌ಐಆರ್ ದಾಖಲಿಸಿದ್ದೇವೆ. ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಪ್ರೊಫೈಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗಲೂ ನಾವು ಅವುಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ಅವುಗಳನ್ನು ಗುರುತಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದ್ದೇವೆ. ಇಲ್ಲಿಯವರೆಗೆ 103 ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ಭೀತಿಯನ್ನು ಹರಡುವ ಪ್ರೊಫೈಲ್‌ಗಳಿವೆ ಮತ್ತು ಮಹಾ ಕುಂಭಮೇಳದ ಮಹಿಳೆಯರ ಖಾಸಗಿ ವೀಡಿಯೊಗಳನ್ನು ಪ್ರಕಟಿಸುತ್ತಿರುವ ಪ್ರೊಫೈಲ್‌ಗಳಿವೆ" ಎಂದು ಅಧಿಕಾರಿ ಹೇಳಿದರು.