ಚಂಡೀಗಢ: 'ಡಂಕಿ ಮಾರ್ಗ' ಮೂಲಕ ಅಮೆರಿಕಕ್ಕೆ ತೆರಳಿದ್ದ 42 ಮಂದಿ ಭಾರತೀಯರು ಕಳೆದ 15 ವರ್ಷಗಳಿಂದ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ಫತೇಗಢ ಸಾಹಿಬ್ ಜಿಲ್ಲೆಯ ಟ್ಯಾಪ್ರಿಯನ್ ಗ್ರಾಮದ ದಲ್ಜಿತ್ ಸಿಂಗ್ ಅವರ ಪುತ್ರ ರವೀಂದರ್ ಸಿಂಗ್ ಸೆಪ್ಟೆಂಬರ್ 15, 2010 ರಂದು ಅಮೆರಿಕಕ್ಕೆ ಹೋಗಿದ್ದು, ಕುಟುಂಬಕ್ಕೆ ಇದೂವರೆಗೆ ಆತನ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಹನ್ನೆರಡನೇ ತರಗತಿ ಮುಗಿಸಿದ್ದ ನನ್ನ ಹಿರಿಯ ಮಗ ಚಾಲಕನಾಗಿದ್ದನು. ಜೀವನೋಪಾಯಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದ. ಬಳಿಕ ಪಂಚಕುಲದಲ್ಲಿರುವ ಟ್ರಾವೆಲ್ ಏಜೆಂಟ್‌ಗಳನ್ನು ಸಂಪರ್ಕಿಸಿದ್ದೆವು. 20 ಲಕ್ಷ ರೂ.ಗಳಿಗೆ ಒಪ್ಪಂದವಾಗಿತ್ತು. ನಾವು ಮುಂಗಡವಾಗಿ 5 ಲಕ್ಷ ರೂ.ಗಳನ್ನು ನೀಡಿದ್ದೆವು. ನಮ್ಮ ಮಗನನ್ನು ಇತರರೊಂದಿಗೆ ನೇರವಾಗಿ ಮೆಕ್ಸಿಕೊಕ್ಕೆ ಕರೆದೊಯ್ಯಲಾಗುವುದು ಮತ್ತು ನಂತರ ಅಲ್ಲಿಂದ ಅಮೆರಿಕಾಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಿದ್ದರು. ಆದರೆ, ದೆಹಲಿಯಿಂದ ಮನಾಗುವಾಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು.
10 ದಿನಗಳ ಬಳಿಕ ಗ್ವಾಟೆಮಾಲಾ ನಗರವನ್ನು ತಲುಪಿದ್ದಾರೆಂಬ ವಿಚಾರ ತಿಳಿಯಿತು. ಬಳಿಕ ಏಜೆಂಟರು ಉಳಿದ 10 ಲಕ್ಷ ರೂ.ಗಳನ್ನು ಕೇಳಿದರು,. ನಾವು ಅವರಿಗೆ 7 ಲಕ್ಷ ರೂ.ಗಳನ್ನು ನೀಡಿದ್ದೆವು. ನಮ್ಮ ಮಗ ಅಮೆರಿಕ ತಲುಪಿದ ನಂತರ ನಮಗೆ ಮರಳಿ ಕರೆ ಮಾಡುತ್ತಾರೆ ಎಂದು ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ನಮ್ಮ ಮಗ ನಮ್ಮೊಂದಿಗೆ ಮಾತನಾಡಿಲ್ಲ ಎಂದು ದಲ್ಜಿತ್ ಸಿಂಗ್ ಅವರು ಹೇಳಿದ್ದಾರೆ.
ನಾವೀಗ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇವೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಕಳೆದ ತಿಂಗಳು ನಮ್ಮ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಮ್ಮನ್ನು ಎರಡು ಬಾರಿ ಪ್ರಶ್ನಿಸಿದ್ದಾರೆ. ಸಿಬಿಐನಿಂದ ನಮ್ಮ ಮಕ್ಕಳ ಬಗ್ಗೆ ಏನಾದರೂ ಸುಳಿವು ಸಿಗಬಹುದು ಎಂದು ನಂಬಿದ್ದೇವೆ, ಏಜೆಂಟರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಸಂತ್ರಸ್ತ ಕುಟುಂಬಗಳ ಪರ ವಕೀಲ ಸುಖ್‌ಪ್ರೀತ್ ಗ್ರೆವಾಲ್ ಅವರು ಮಾತನಾಡಿ, 2023 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಪ್ರಕರಣವನ್ನು ವಿಲೇವಾರಿ ಮಾಡಿದ್ದು, ಸಿಬಿಐ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
2010ದಲ್ಲಿ ಭಾರತದಿಂದ ಒಟ್ಟು 102 ಯುವಕರು ಡಂಕಿ ಮಾರ್ಗದ ಮೂಲಕ ಅಮೆರಿಕಾಕ್ಕೆ ಹೋಗಿದ್ದರು. 102 ಯುವಕರಲ್ಲಿ ಪಂಜಾಬ್ ರಾಜ್ಯದ 42 ಯುವಕರು ಇದ್ದರು. ಇವರು ಅಮೆರಿಕಾ ತಲುಪಿಲ್ಲ. ಕೊನೆಯ ಬಾರಿಗೆ ತಮ್ಮ ಕುಟುಂಬಗಳನ್ನು ಯಾವಾಗ ಸಂಪರ್ಕಿಸಿದರು ಎಂಬುದು ಯಾರಿಗೂ ತಿಳಿದಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ರವೀಂದರ್ ಸಿಂಗ್ ಅವರ ತಂದೆ ಜಸ್ವಂತ್ ಸಿಂಗ್ ಅವರು 2010 ರಲ್ಲಿ ಅರ್ಜಿ ಸಲ್ಲಿಸಿದರು, ಹೈಕೋರ್ಟ್ ಮಧ್ಯಪ್ರವೇಶದ ಬಳಿರ ಎಫ್‌ಐಆರ್ ದಾಖಲಿಸಲಾಗಿತ್ತು. ಆರೋಪಿಗಳ ನಿರೀಕ್ಷಣಾ ಜಾಮೀನು ವಜಾಗೊಳಿಸಲಾಯಿತು ಆದರೆ, ಬಂಧಿಸುವ ಬದಲು ಪಂಜಾಬ್ ಪೊಲೀಸರು ರದ್ದತಿ ವರದಿಯನ್ನು ಸಲ್ಲಿಸಿದ್ದಾರೆ. ನಂತರ ಸಿಂಗ್ 2013 ರಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು 2023 ರಲ್ಲಿ ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು. ಅರ್ಜಿಯ ವಿಚಾರಣೆಯ ಸಮಯದಲ್ಲಿ 100 ಕ್ಕೂ ಹೆಚ್ಚು ಯುವಕರು ಕಾಣೆಯಾಗಿದ್ದಾರೆ ಎಂಬ ಅಂಶವನ್ನು ಹೈಕೋರ್ಟ್ ಗಮನಕ್ಕೆ ತರಲಾಯಿತು. ಇನ್ನೂ ಮೂರು ಕುಟುಂಬಗಳು ಕೂಡ ಅರ್ಜಿಗಳನ್ನು ಸಲ್ಲಿಸಿದವು. ಆ ನಂತರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಜನವರಿ 2, 2012 ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 102 ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಕೆಲ ಪಾಸ್‌ಪೋರ್ಟ್‌ಗಳು ಕಾಣೆಯಾದ ಯುವಕರದ್ದಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಏಜೆಂಟರುಗಳು ಇವರನ್ನು ದೆಹಲಿಯಿಂದ ದೋಹಾಗೆ ಕರೆದೊಯ್ದಿರುವ ಶಂಕೆಗಳಿವೆ. ಆದರೆ, ಇದನ್ನು ದೃಢೀಕರಿಸಲು ವಲಸೆ ದಾಖಲು ಲಭ್ಯವಿಲ್ಲವಾಗಿದೆ. ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡ ಅನೇಕ ಕುುಂಬಗಳು ನನ್ನೊಂದಿಗೆ ಸಂಪರ್ಕದಲ್ಲಿವೆಂದು ಹೇಳಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ ಮತ್ತೊಂದು ಕುಟುಂಬ ಕೂಡ ತಮ್ಮ ಮಗ ಹರ್ಸಿಮ್ರಂಜಿತ್ ಸಿಂಗ್ ಧಲಿವಾಲ್ ನಾಪತ್ತೆಯಾಗಿದ್ದಾನೆಂದು ನನ್ನನ್ನು ಸಂಪರ್ಕಿಸಿದೆ. ಆತನನ್ನು ಹುಡುಕಲು ಧಲಿವಾಲ್ ಅವರ ಸಹೋದರಿ ಅಮೆರಿಕಕ್ಕೆ ಹೋಗಿದ್ದರು. ಆದರೆ, ಪತ್ತೆಯಾಗಿಲ್ಲ. ಈ ಬಗ್ಗೆ ಅಮೆರಿಕ ಅಧಿಕಾರಿಗಳಿಗೆ ಹಾಗೂ ಸಿಬಿಐಗೆ ಹಲವಾರು ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಸಿಬಿಐ ಅಧಿಕಾರಿಗಳು, ಪಂಜಾಬ್ ಪೊಲೀಸರ ಎನ್‌ಆರ್‌ಐ ವಿಭಾಗದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆಂದು ಗ್ರೆವಾಲ್ ತಿಳಿಸಿದ್ದಾರೆ.