ಭೋಪಾಲ್/ಮುಂಬೈ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಾವು ವಿಮಾನದಲ್ಲಿ ಪ್ರಯಾಣಿಸುವಾಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆ ತಮಗೆ "ಮುರಿದ" ಸೀಟು ನೀಡಿದ್ದಕ್ಕಾಗಿ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆದು ಮುರಿದ ಸೀಟುಗಳನ್ನು ನೀಡುವುದು "ಅನೈತಿಕ" ಮತ್ತು ಇದು ಪ್ರಯಾಣಿಕರಿಗೆ ಮಾಡುವ ಮೋಸವಲ್ಲವೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ಚೌಹಾಣ್ ಅವರು ತಮ್ಮ ವಿಮಾನಯಾನ ಅನುಭವವನ್ನು X ನಲ್ಲಿ ಹಂಚಿಕೊಂಡಿದ್ದು, ನಾನು ಕೆಲಸದ ನಿಮಿತ್ತ ಭೋಪಾಲ್‌ನಿಂದ ದೆಹಲಿಗೆ ಬರಬೇಕಾಯಿತು. ಅದಕ್ಕಾಗಿ ನಾನು ಏರ್ ಇಂಡಿಯಾ ವಿಮಾನ AI436 ರಲ್ಲಿ ಟಿಕೆಟ್ ಬುಕ್ ಮಾಡಿದ್ದೆ. ನನಗೆ ಸೀಟ್ ಸಂಖ್ಯೆ 8C ನೀಡಲಾಗಿತ್ತು. ನಾನು ಸೀಟಿನಲ್ಲಿ ಕುಳಿತುಕೊಳ್ಳಲು ಹೋದಾಗ ಆ ಸೀಟು ಮುರಿದು ಕೆಳಗೆ ಬಾಗಿತ್ತು. ಅದರಲ್ಲಿ ಕುಳಿತುಕೊಂಡು ಪ್ರಯಾಣಿಸುವುದು ಕಷ್ಟಕರವಾಗಿತ್ತು’’ ಎಂದು ಹೇಳಿದ್ದಾರೆ.
ನಾನು ವಿಮಾನಯಾನ ಸಿಬ್ಬಂದಿಗೆ ಈ ಸೀಟು ಸರಿ ಇಲ್ಲದಿದ್ದರೆ ಅದನ್ನು ಏಕೆ ಹಂಚಿಕೆ ಮಾಡಲಾಯಿತು ಎಂದು ಪ್ರಶ್ನಿಸಿದೆ. ಆಗ ಅವರು, ‘‘ಈ ಸೀಟು ಚೆನ್ನಾಗಿಲ್ಲ ಮತ್ತು ಇದರ ಟಿಕೆಟ್ ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಮೊದಲೇ ತಿಳಿಸಲಾಗಿತ್ತು’’ ಎಂದು ಹೇಳಿದರು. ಇದು ಒಂದೇ ಸೀಟು ಮುರಿದಿರಲಿಲ್ಲ, ಇನ್ನೂ ಹಲವು ಸೀಟುಗಳು ಮುರಿದಿದ್ದವು ಎಂದು ಚೌಹಾಣ್ ತಿಳಿಸಿದ್ದಾರೆ.
"ಸಹ ಪ್ರಯಾಣಿಕರು ತಮ್ಮ ಸೀಟುಗಳನ್ನು ಬದಲಾಯಿಸಿಕೊಳ್ಳಲು ಕೇಳಿಕೊಂಡರು. ಆದರೆ ಬೆರೆಯವರಿಗೆ ಅನಾನುಕೂಲ ಉಂಟಾಗುವುದು ಬೇಡ ಎಂದು ನಾನು ಅದೇ ಸೀಟಿನಲ್ಲಿ ನನ್ನ ಪ್ರಯಾಣವನ್ನು ಮುಂದುವರೆಸಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ "ಅನಾನುಕೂಲತೆ" ಗಾಗಿ ಕ್ಷಮೆಯಾಚಿಸಿತ್ತೇವೆ ಮತ್ತು ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ.