ನವದೆಹಲಿ: ದೆಹಲಿ ವಿಧಾನಸಭೆ ಪ್ರವೇಶಿಸದಂತೆ ಆಮ್ ಆದ್ಮಿ ಪಕ್ಷದ ಶಾಸಕರನ್ನು ತಡೆಯಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕಿ (ಎಲ್‌ಒಪಿ) ಅತಿಶಿ ಅವರು ಗುರುವಾರ ಆರೋಪಿಸಿದ್ದಾರೆ.
ಅಧಿಕಾರಕ್ಕೆ ಬಂದ ನಂತರ ಸರ್ವಾಧಿಕಾಕಿ ಬಿಜೆಪಿ "ಎಲ್ಲಾ ಮಿತಿಗಳನ್ನು ದಾಟುತ್ತಿದೆ" ಎಂದು ಆತಿಶಿ ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆತಿಶಿ ಅವರು, ಜೈ ಭೀಮ್' ಘೋಷಣೆಗಳನ್ನು ಕೂಗಿದ್ದಕ್ಕಾಗಿ ಎಎಪಿ ಶಾಸಕರನ್ನು ಸದನದಿಂದ ಮೂರು ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಇಂದು ನಮ್ಮ ಶಾಸಕರನ್ನು ವಿಧಾನಸಭೆಯ ಆವರಣ ಪ್ರವೇಶಿಸಲು ಕೂಡ ಅನುಮತಿಸಲಾಗುತ್ತಿಲ್ಲ. ದೆಹಲಿ ವಿಧಾನಸಭೆಯ ಇತಿಹಾಸದಲ್ಲಿ ಈ ರೀತಿ ಎಂದೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಪೋಸ್ಟ್ ಮಾಡಿ, ದೆಹಲಿಯಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ದೆಹಲಿ ಪೊಲೀಸ್ ಅಧಿಕಾರಿಗಳು, ಆಮ್ ಆದ್ಮಿ ಪಕ್ಷದ ಶಾಸಕರು ಮತ್ತು ವಿರೋಧ ಪಕ್ಷದ ನಾಯಕರನ್ನು ವಿಧಾನಸಭೆ ಆವರಣದೊಳಗೆ ಬಿಡುತ್ತಿಲ್ಲ. ವಿಧಾನಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ಅವರ ಆದೇಶದ ಮೇರೆಗೆ ಈ ರೀತಿ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಚುನಾಯಿತ ಶಾಸಕರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡದಿರುವುದು ಇದೇ ಮೊದಲು ಎಂದು ಕಿಡಿಕಾರಿದೆ.
ಮಂಗಳವಾರ ಸದನದ ಕಲಾಪಗಳು ಪ್ರಾರಂಭವಾದ ಕೂಡಲೇ, ಸಿಎಂ ಕಚೇರಿಯಿಂದ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಅತಿಶಿ ಮತ್ತು ಇತರ ಎಎಪಿ ಶಾಸಕರು ಪ್ರತಿಭಟನೆ ಆರಂಭಿಸಿದ್ದರು. ಇದರಂದ ತೀವ್ರ ಗದ್ದಲ ಶುರುವಾಗಿತ್ತು.
ಹೊಸದಾಗಿ ರಚನೆಯಾದ ಸದನವನ್ನು ಉದ್ದೇಶಿಸಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಉದ್ಘಾಟನಾ ಭಾಷಣ ಮಾಡಲು ಅವಕಾಶ ನೀಡಲಿಲ್ಲ. ಗವರ್ನರ್ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 21 ಎಎಪಿ ಶಾಸಕರನ್ನು ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಅಮಾನತುಗೊಳಿಸಿದ್ದರು.
ಈ ವೇಳೆ ಮಾತನಾಡಿದ ಆತಿಶಿ ಅವರು, ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಾಗವನ್ನು ಪ್ರಧಾನಿ ಮೋದಿ ಪಡೆಯುತ್ತಾರೆಂದು ಅವರು ನಂಬುತ್ತಾರೆಯೇ?" ಎಂದು ಪ್ರಶ್ನಿಸಿದರು.