ನವದೆಹಲಿ: 2014ರಿಂದೀಚೆಗೆ ಇದೇ ಮೊದಲ ಬಾರಿಗೆ ಬಜೆಟ್ ಅಧಿವೇಶನದ ಸಂದರ್ಭದಲ್ಲಿ 'ವಿದೇಶಿಯರ ಬೆಂಕಿ ಹಚ್ಚುವ ಪ್ರಯತ್ನ ನಡೆದಿಲ್ಲ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಶುಕ್ರವಾರ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಅವರು ಜನರ ಸಮಸ್ಯೆಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ ಮತ್ತು ಅವುಗಳನ್ನು ಪರಿಹರಿಸುವುದಿಲ್ಲ ಎಂದಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಭಾರತದಲ್ಲಿ 2014ರ ನಂತರ ಇದೇ ಮೊದಲ ಬಾರಿಗೆ 'ವಿದೇಶಿಯರಿಂದ ಬೆಂಕಿ ಹಚ್ಚುವ' ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಹೇಳಿದರು.
'ಅವರು (ಪ್ರಧಾನಿ ನರೇಂದ್ರ ಮೋದಿ) ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಮತ್ತು ಆ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಕಳೆದ ಅಧಿವೇಶನದಲ್ಲಿ ನಾವು ನೋಡಿದ್ದೇವೆ, ಅವರು ಚರ್ಚೆಗೆ ಅವಕಾಶ ನೀಡಲಿಲ್ಲ. ಹಾಗಾಗಿ ಅವರು ಕೇವಲ ಇಂತಹ ವಿಷಯಗಳನ್ನು ಹೇಳುತ್ತಾರೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, 2014 ರಿಂದ ಪ್ರತಿ ಬಾರಿ ಬಜೆಟ್ ಅಧಿವೇಶನಕ್ಕೂ ಮುನ್ನ ಕೆಲವು ಜನರು ಕಿಡಿಗೇಡಿತನ ಮಾಡುತ್ತಿದ್ದರು ಮತ್ತು ಅಂತಹ ಪ್ರಯತ್ನಗಳಿಗೆ ಉತ್ತೇಜನ ನೀಡುವವರ ಸಂಖ್ಯೆಯೂ ಹೆಚ್ಚಿತ್ತು. ಬಹುಶಃ 2014 ರಿಂದೀಚೆಗೆ ಇದು ಸಂಸತ್ತಿನ ಮೊದಲ ಅಧಿವೇಶನವಾಗಿದ್ದು, ಇದರಲ್ಲಿ ವಿದೇಶಿ ಹಸ್ತಕ್ಷೇಪವನ್ನು ಮಾಡಲಾಗಿಲ್ಲ. ವಿದೇಶದಿಂದ ಬೆಂಕಿಯನ್ನು ಹೊತ್ತಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.