ನವದೆಹಲಿ: ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೀವ್ರತರವಾದ ಕೃಷಿ ಸಮಸ್ಯೆಗಳತ್ತ ಅಸಡ್ಡೆಯೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಿಂದಿಯಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರ ಧೀರ್ಘ ಕಾಲದ ಬೇಡಿಕೆಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಕನಿಷ್ಠ ಬೆಂಬಲ ಬೆಲೆಗೆ ಶಾಸನಬದ್ಧ ಖಾತ್ರಿ ಮತ್ತು ಸಮಗ್ರ ಸಾಲ ಮನ್ನಾ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
TNIE ವರದಿಯೊಂದನ್ನು ಉಲ್ಲೇಖಿಸಿ, ಮಹಾರಾಷ್ಟ್ರದಲ್ಲಿ 2025 ಜನವರಿಂದ ಮಾರ್ಚ್ ವರೆಗೂ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮ್ಮನೆ ಯೋಚಿಸಿ, ಕೇವಲ ಮೂರು ತಿಂಗಳಲ್ಲಿ ಇಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ. ಈ ಕುಟುಂಬಗಳು ಬದುಕು ಹಾಳಾಗಿದೆ. ಸರ್ಕಾರ ಏನು ಮಾಡುತ್ತಿದೆ? ಮೌನವಾಗಿ ನೋಡುತ್ತಿದ್ದೇಯೆ? ಎಂದು ಪ್ರಶ್ನಿಸಿದ್ದಾರೆ.
ಬಿತ್ತನೆ ಬೀಜ, ರಸಗೊಬ್ಬರ, ಡೀಸೆಲ್ ಗಳ ಬೆಲೆ ಹೆಚ್ಚಳದಿಂದ ರೈತರನ್ನು ಸಾಲದ ಕೂಪಕ್ಕೆ ತಳ್ಳಲಾಗಿದೆ. ಆದಾಗ್ಯೂ ಅರ್ಥಪೂರ್ಣ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕನಿಷ್ಠ ಬೆಂಬಲ ಬೆಲೆ ಮತ್ತು ರೈತರ ಸಾಲ ಮನ್ನಾಕ್ಕೆ ಯಾವುದೇ ಖಾತ್ರಿ ಇಲ್ಲ. ಅವೆಲ್ಲವನ್ನೂ ನಿರ್ಲಕ್ಷಿಸಲಾಗುತ್ತಿದೆ. ಸರ್ಕಾರ ದೊಡ್ಡ ಕೈಗಾರಿಕೆಗಳತ್ತ ಉದಾರತೆ ಮೆರೆಯುತ್ತಿದೆ. ಯಾವುದೇ ಹಿಂಜರಿಕೆಯಿಲ್ಲದೆ ಅಂತಹವರ ಸಾವಿರಾರು ಕೋಟಿ ರೂ. ಮನ್ನಾ ಮಾಡಲಾಗುತ್ತಿದೆ. ಅನಿಲ್ ಅಂಬಾನಿ ಎಸ್ ಬಿಐಗೆ ರೂ. 48,000 ಕೋಟಿ ವಂಚನೆ ಮಾಡಿರುವ ಸುದ್ದಿ ನೋಡಿ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ರಾಹುಲ್ ಗಾಂಧಿ ಅವರ ಬೂಟಾಟಿಕೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ 15 ವರ್ಷಗಳ ಕಾಂಗ್ರೆಸ್ -ಎನ್ ಸಿಪಿ ಸರ್ಕಾರದ ಅವಧಿಯಲ್ಲಿ 55, 928 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜಕೀಯಕ್ಕಾಗಿ ಸಾವನ್ನ ಲೆಕ್ಕಹಾಕುವುದು ನಾಚಿಕೆಗೇಡಿನ ಸಂಗತಿ. ನಮ್ಮ ಕಡೆಗೆ ಕೈ ತೋರಿಸುವ ಬದಲು, ಮಹಾರಾಷ್ಟ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗ ನಡೆದ ದುರಂತದ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದಿದ್ದಾರೆ.