ಪಾಟ್ನಾ: ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಯ ಪ್ರಮುಖ ಆರೋಪಿಯನ್ನು ಸೋಮವಾರ ತಡರಾತ್ರಿ ಪಾಟ್ನಾ ನಗರ ಪ್ರದೇಶದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ.
ವಿಕಾಸ್ ಅಲಿಯಾಸ್ ರಾಜ (29) ಹತ್ಯೆಗೀಡಾದ ಆರೋಪಿ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿಯೂ ಈತ ಬೇಕಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸುಳಿವು ಆಧಾರದ ಮೇಲೆಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡವು ವಿಕಾಸ್‌ನನ್ನು ಹುಡುಕಲು ಬೆಳಗಿನ ಜಾವ 2.25 ರ ಸುಮಾರಿಗೆ ದಮಾರಿಯಾ ಘಾಟ್‌ಗೆ ತಲುಪಿತ್ತು.
ಈ ವೇಳೆ ಪೊಲೀಸ್ ಸಿಬ್ಬಂದಿಗಳನ್ನು ಕಂಡ ಕೂಡಲೇ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಬಳಿಕ ಗುಂಡು ಹಾರಿಸಿದ. ಬಳಿಕ ಅಧಿಕಾರಿಗಳು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ದಮೈಯಾ ಘಾಟ್ ಬಳಿ ನಸುಕಿನ ಜಾವ 2:45ರ ಸುಮಾರಿಗೆ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಘಟನಾ ಸ್ಥಳದಿಂದ ಒಂದು ಪಿಸ್ತೂಲ್, ಒಂದು ಗುಂಡು ಮತ್ತು ಒಂದು ಕಾರ್ಟ್ರಿಡ್ಜ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಬಿಹಾರ ಪೊಲೀಸರು ಹೇಳಿಕೆ ನೀಡಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಬಿಜೆಪಿ ನಾಯಕ ಹಾಗೂ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ಪನಾಚೆ ಹೋಟೆಲ್ ಪಕ್ಕದಲ್ಲಿರುವ `ಟ್ವಿನ್ ಟವರ್’ ಸೊಸೈಟಿಯಲ್ಲಿ ಖೆಮ್ಕಾ ಅವರು ವಾಸಿಸುತ್ತಿದ್ದರು. ಅವರು ಮನೆ ಕಡೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಇದೀಗ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿರುವ ವಿಕಾಸ್, ಗೋಪಾಲ್ ಖೇಮ್ಕಾ ಅವರನ್ನು ಕೊಲ್ಲಲು ಬಳಸಿದ ಆಯುಧಗಳನ್ನು ಪೂರೈಸಿದ್ದ ಎನ್ನಲಾಗಿದೆ. ಅಲ್ಲದೇ, ಪ್ರಕರಣದ ಪ್ರಮುಖ ಶಂಕಿತ ಶೂಟರ್ ಉಮೇಶ್ ಜೊತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ 12ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.