ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ಸಮೀಪ ಪದ್ರಾ ತಾಲ್ಲೂಕಿನ ಮುಜ್‌ಪುರ ಬಳಿ ಗಂಭೀರಾ ಸೇತುವೆ ಇಂದು ಬುಧವಾರ ಬೆಳಗ್ಗೆ ಕುಸಿದು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದು ಮೂವರು ಮೃತಪಟ್ಟಿದ್ದಾರೆ. ಘಟನೆಯಿಂದ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ಪ್ರಮುಖ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆಯಿಂದ ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ನದಿಗೆ ಉರುಳಿದೆ. ಕೆಲವೇ ನಿಮಿಷಗಳಲ್ಲಿ, ಗ್ರಾಮಸ್ಥರು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಐವರನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ. ಮೂವರು ಮೃತಪಟ್ಟಿದ್ದಾರೆ.
ಈ ಸೇತುವೆ ಬಹಳ ಹಿಂದಿನಿಂದಲೂ ಶಿಥಿಲಾವಸ್ಥೆಯಲ್ಲಿದ್ದು ಅಪಾಯಕಾರಿಯಾಗಿತ್ತು. ಸ್ಥಳೀಯರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ತುರ್ತು ದುರಸ್ತಿ ಮಾಡಬೇಕೆಂದು ಇಲ್ಲವೇ ಹೊಸದಾಗಿ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಸ್ಥಳೀಯರ ಮಾತುಗಳನ್ನು ನಿರ್ಲಕ್ಷಿಸಲಾಗುತ್ತಿತ್ತು.
ಸೇತುವೆ ಕುಸಿತದಿಂದ ಆನಂದ್, ವಡೋದರಾ, ಭರೂಚ್ ಮತ್ತು ಅಂಕಲೇಶ್ವರ ಜಿಲ್ಲೆಗಳನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು, ಪ್ರಾದೇಶಿಕ ಸಾರಿಗೆ ಮತ್ತು ವಾಣಿಜ್ಯ ಸಾರಿಗೆ ಬಳಕೆಯನ್ನು ನಿಷ್ಕ್ರಿಯಗೊಳಿಸಿದೆ.
ಈ ಘಟನೆ ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ದೀರ್ಘಕಾಲದ ನಿಷ್ಕ್ರಿಯತೆ ವೆಚ್ಚದ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತಿದೆ.
ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶಗಳನ್ನು ಸಂಪರ್ಕಿಸುವ ನದಿಯ ಮೇಲಿರುವ ಗಂಬಿರ ಸೇತುವೆಯ ಸ್ಲ್ಯಾಬ್ ಕುಸಿದು ಐದಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ ಎಂದು ಗುಜರಾತ್ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಹೇಳಿದ್ದಾರೆ.
ಮೂವರು ಮೃತಪಟ್ಟಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಪಟೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಸೇತುವೆಯನ್ನು 1985 ರಲ್ಲಿ ನಿರ್ಮಿಸಲಾಯಿತು. ಅದರ ನಿರ್ವಹಣೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತಿತ್ತು. ಇಂದಿನ ಘಟನೆಯ ಹಿಂದಿನ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.