ಅಹಮದಾಬಾದ್: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ 43 ವರ್ಷದ ಹಳೆಯ ಸೇತುವೆ ಕುಸಿದು ಬಿದ್ದಿದ್ದ ಪ್ರಕರಣದಲ್ಲಿ ಮತ್ತೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಶೇ. 98 ರಷ್ಟು ಸಾಂದ್ರೀಕೃತ ಸಲ್ಫ್ಯೂರಿಕ್ ಆ್ಯಸಿಡ್ ಹೊತ್ತಿದ್ದ ಟ್ಯಾಂಕರ್ ವೊಂದು ನದಿಯಲ್ಲಿ ಮುಳಿಗಿದ್ದು, ರಕ್ಷಣಾ ತಂಡಗಳು ತೀವ್ರ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿವೆ ಎಂದು ವಡೋದರಾ ಕಲೆಕ್ಟರ್ ಅನಿಲ್ ಧಮೇಲಿಯಾ ಅವರು ಹೇಳಿದ್ದಾರೆ.
ಟ್ಯಾಂಕರ್ ನಲ್ಲಿರುವ ರಾಸಾಯನಿಕ ಅಪಾಯಕಾರಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಕೆಲವರಿಗೆ ಚರ್ಮದ ಸಮಸ್ಯೆ ಎದುರಾಗಿ, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ. ಅಪಾಯದ ಹೊರತಾಗಿಯೂ, ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದು ತಿಳಿಸಿದ್ದಾರೆ.
ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ 10 ಗಂಟೆಯ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನದಿಯಿಂದ 18 ಶವಗಳನ್ನು ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ 7 ಮಂದಿ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿತ್ತು. ಮರುದಿನ ಈ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು. ಮೊದಲ ದಿನದ ಕಾರ್ಯಾಚರಣೆ ವೇಳೆ 12 ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಇನ್ನೂ 6 ಶವಗಳು ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಳಿಗಿರುವ ವಾಹನ, ಸವಾರರನ್ನು ಗುರ್ತಿಸಲಾಗಿದೆ. ನಾಪತ್ತೆಯಾಗಿರುವ ಮತ್ತಿಬ್ಬರು ಪತ್ತೆಯಾದ ಬಳಿಕ ಸೇತುವೆ ಕೆಡುವು ಕಾರ್ಯಾಚರಣೆ ನಡೆಸಲಾಗುವುದು. ಇದಲ್ಲದೆ, ಮುಳುಗಿರುವ ಟ್ಯಾಂಕರ್ ನಿಂದ ಎದುರಾಗಿರುವ ಅಪಾಯವನ್ನೂ ದೂರಾಗಿಸಲು ಪ್ರಯತ್ನ ನಡೆಲಾಗುತ್ತದೆ. ಸೇತುವೆಯ ಸ್ಲ್ಯಾಬ್ ಕಿತ್ತುಹಾಕಿದಂತೆ ಸಿಲುಕಿಕೊಂಡಿರುವ ಟ್ರಕ್ ಗಳ ಹೊರತೆಗೆದಯಲು ಪುಲ್ಲರ್ ಕಾರ್ಯವಿಧಾನವನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.