ಪಾಟ್ನಾ: ಬಿಹಾರದಲ್ಲಿ ಕೊಲೆಗಳು ಹೆಚ್ಚಾಗುತ್ತಿರುವುದಕ್ಕೆ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಮಿತ್ರ ಚಿರಾಗ್ ಪಾಸ್ವಾನ್ ಗುಡುಗಿದ ಬೆನ್ನಲ್ಲೇ ಇದೀಗ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಜೆಡಿಯು-ಬಿಜೆಪಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ರಾತ್ರಿ ಪಾಟ್ನಾದಲ್ಲಿ ಬಿಜೆಪಿ ನಾಯಕನ ಹತ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಪದೇ ಪದೇ ಕೊಲೆಯ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಅಪರಾಧಗಳ ಬಗ್ಗೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ಭಯದಲ್ಲಿ ಬದುಕುತ್ತಿದ್ದಾರೆ ಮತ್ತು ಅಂತಹ ಅಪರಾಧಗಳು ಮರುಕಳಿಸದಂತೆ ತಡೆಯುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕ ಸುರೇಂದ್ರ ಕೇವತ್ (52) ಅವರನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಕಳೆದ ವಾರ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ನಡೆಯುತ್ತಿರುವ ಈ ಕೊಲೆಗಳು ನಿತೀಶ್ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುವಂತೆ ಮಾಡಿವೆ.
ಹಿಂದೊಮ್ಮೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆಪ್ತರಾಗಿದ್ದ ರಾಮ್ ಕೃಪಾಲ್ ಯಾದವ್ ಅವರು 2014 ರಲ್ಲಿ ಬಿಜೆಪಿ ಸೇರಿದ್ದರು. 2014 ಮತ್ತು 2019 ರ ನಡುವೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಪಾಟ್ಲಿಪುತ್ರ ಕ್ಷೇತ್ರದಲ್ಲಿ ಲಾಲು ಯಾದವ್ ಅವರ ಪುತ್ರಿ ಮಿಸಾ ಭಾರತಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಸುರೇಂದ್ರ ಕೇವತ್ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಆಗಿದ್ದರು. ಇದು ಅತ್ಯಂತ ದುರದೃಷ್ಟಕರ ಘಟನೆ. ಪಾಟ್ನಾದಲ್ಲಿ ಆಗಾಗ್ಗೆ ಕೊಲೆಗಳು ನಡೆಯುತ್ತಿವೆ ಮತ್ತು ಇದು ಕಳವಳಕಾರಿ ಸಂಗತಿಯಾಗಿದೆ. ಅಪರಾಧಿಗಳನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು. ಘಟನೆ ನಡೆದ ಎರಡು ಗಂಟೆಗಳ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಅಪರಾಧಿಯನ್ನು ಬಂಧಿಸದಿದ್ದರೆ ಹೇಗೆ? ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಯಾದವ್ ಒತ್ತಾಯಿಸಿದ್ದಾರೆ.
ಉದ್ಯಮಿಗಳಾದ ರಮಾಕಾಂತ್ ಯಾದವ್ ಮತ್ತು ಗೋಪಾಲ್ ಖೇಮ್ಕಾ ಅವರ ಹತ್ಯೆ ಉಲ್ಲೇಖಿಸಿದ ಯಾದವ್, ಜನರು ಭಯದಿಂದ ಬದುಕುತ್ತಿದ್ದಾರೆ, ಅವರು ಸುರಕ್ಷಿತವಾಗಿಲ್ಲ, ಜನರಿಗೆ ಭದ್ರತೆ ನೀಡುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಮಾಜಿ ಕೇಂದ್ರ ಸಚಿವರು ಒತ್ತಾಯಿಸಿದರು.
ಅಪರಾಧ ಹೆಚ್ಚಳ ಹಿಂದೆ ಪ್ರತಿಪಕ್ಷ ಆರ್‌ಜೆಡಿ ಕೈವಾಡವಿದೆ ಎಂಬ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆಯಾಗಬೇಕು ಎಂದರು.
ಇದಕ್ಕೂ ಮುನ್ನಾ ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಹಾರ ಪೊಲೀಸರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದರು. ಬಿಹಾರಿಗಳು ಇನ್ನೂ ಎಷ್ಟು ಕೊಲೆಗಳನ್ನು ಎದುರಿಸುತ್ತಾರೆ? ಬಿಹಾರ ಪೊಲೀಸರ ಜವಾಬ್ದಾರಿ ಏನು ಎಂದು ಅರ್ಥವಾಗದಂತಾಗಿದೆ ಎಂದು ಹೇಳಿದ್ದರು.