ನವದೆಹಲಿ: ಐತಿಹಾಸಿಕ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಬಾಹ್ಯಾಕಾಶಯಾನ ಮುಗಿಸಿ ಮಂಗಳವಾರ ಭೂಮಿಗೆ ಮರಳಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರನ್ನು ಸ್ವಾಗತಿಸಲು ನಾನು ದೇಶದೊಂದಿಗೆ ಸೇರುತ್ತೇನೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿಯಾಗಿ, ಅವರು ತಮ್ಮ ಸಮರ್ಪಣೆ, ಧೈರ್ಯ ಮತ್ತು ಪ್ರವರ್ತಕ ಮನೋಭಾವದಿಂದ ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ನಮ್ಮದೇ ಆದ ಮಾನವ ಬಾಹ್ಯಾಕಾಶ ಯಾನ ಮಿಷನ್ ಗಗನಯಾನದತ್ತ ಮತ್ತೊಂದು ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
18 ದಿನಗಳ ನಂತರ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಇಂದು ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶಕ್ಕೆ ಬಂದಿಳಿದಿದೆ.