ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JEM) ಭಯೋತ್ಪಾದಕರ ಸಂಘಟನೆಯ ಟಾಪ್ ಕಮಾಂಡರ್ ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಉಧಮ್‌ಪುರ ಜಿಲ್ಲೆಯ ದುಡು-ಬಸಂತಗಢ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಓರ್ವ ಟಾಪ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ.
ಆತ ಕಳೆದ ನಾಲ್ಕು ವರ್ಷಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಬುಧವಾರ ತಿಳಿಸಿದ್ದಾರೆ. ಭಯೋತ್ಪಾದಕರನ್ನು ಸದೆಬಡಿಯಲು ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು, ಜನರ ಬೆಂಬಲವಿಲ್ಲದೆ ಪೊಲೀಸರು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅಖ್ನೂರ್ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ DGP, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ, ದುಡು-ಬಸಂತಗಢ ಅರಣ್ಯದಲ್ಲಿ ದೊಡ್ಡ ಯಶಸ್ಸನ್ನು ಪಡೆದಿದ್ದೇವೆ. ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯರಾಗಿದ್ದ ಜೈಶ್- ಎ-ಮೊಹಮ್ಮದ್ ಸಂಘಟನೆಯ ಟಾಪ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ .ಕಾರ್ಯಾಚರಣೆಗಳು ಮುಂದುವರೆದಿದ್ದು, ಎಲ್ಲಾ ಭಯೋತ್ಪಾದಕರನ್ನು ಒಬ್ಬೊಬ್ಬರಾಗಿ ನಿರ್ಮೂಲನೆ ಮಾಡಲಾಗುವುದು ಎಂದು ತಿಳಿಸಿದರು.
ಜೂನ್ 26 ರಂದು ಪಾಕಿಸ್ತಾನದ ಮೌಲ್ವಿ ಎಂಬ ಕೋಡ್ ಹೊಂದಿದ್ದ ಜೆಇಎಂ ಭಯೋತ್ಪಾದಕ ಹೈದರ್ ನನ್ನು ಗುಂಡಿನ ಚಕಮಕಿಯಲ್ಲಿ ಹೊಡೆದುರುಳಿಸಲಾಗಿದೆ. ಆದರೆ ಆತನ ಮೂವರು ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಡಿಜಿಪಿ ತಿಳಿಸಿದರು. ಆದರೆ, ಜಮ್ಮುವಿನ ಅರಣ್ಯ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ನಿಖರ ಸಂಖ್ಯೆಯನ್ನು ನೀಡಲು ನಿರಾಕರಿಸಿದ ನಿರಾಕರಿಸಿದರು. ಅದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದರು.