ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಘೋಷಣೆ ಮಾಡಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ INDIA ಮೈತ್ರಿಕೂಟದ ಅಡಿಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದಾಗ್ಯೂ, ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ದವು. ಇದೀಗ ತಾನು ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಎಎಪಿ ಘೋಷಣೆ ಮಾಡಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಎಎಪಿ ನಾಯಕ ಸಂಜಯ್ ಸಿಂಗ್, ಇಂಡಿಯಾ ಒಕ್ಕೂಟದಿಂದ ಆಮ್ ಆದ್ಮಿ ಪಕ್ಷ (Aam Admi Party) ಹೊರ ಬಂದಿದೆ ಎಂದು ಹೇಳಿದ್ದಾರೆ. 'ಇನ್ನು ಮುಂದೆ ಆಪ್ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ. ಇದನ್ನು ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ ಎಂದು ಒಕ್ಕೂಟದಿಂದ ಎಎಪಿ ಹೊರ ಬಂದಿರುವ ಬಗ್ಗೆ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
'ಲೋಕಸಭಾ ಚುನಾವಣೆಯವರೆಗೂ ಭಾರತ ಮೈತ್ರಿಕೂಟ ಇತ್ತು ಎಂಬ ನಮ್ಮ ನಿಲುವನ್ನು ನಾವು ಸ್ಪಷ್ಟಪಡಿಸಿದ್ದೇವೆ. ಸಂಸತ್ತಿನ ವಿಷಯದಲ್ಲಿ, ನಾವು ಯಾವಾಗಲೂ ಸರ್ಕಾರದ ಎಲ್ಲಾ ತಪ್ಪು ನೀತಿಗಳನ್ನು ವಿರೋಧಿಸುತ್ತಿದ್ದೇವೆ. ಪ್ರಸ್ತುತ, ಬಿಹಾರ, ಉತ್ತರ ಪ್ರದೇಶ ಮತ್ತು ಪೂರ್ವಾಂಚಲ ಜನರ ಮನೆಗಳು ಮತ್ತು ಅಂಗಡಿಗಳನ್ನು ಹೇಗೆ ಕೆಡವಿ ನಾಶಪಡಿಸಲಾಗುತ್ತಿದೆ ಎಂಬುದು ನಾವು ನೋಡಿದ್ದೇವೆ ಎಂದು ಕಿಡಿಕಾರಿದರು.
ನಾವು ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುತ್ತೇವೆ. ಇಂದಿನವರೆಗೆ ಆಮ್ ಆದ್ಮಿ ಪಕ್ಷವು ಭಾರತ ಮೈತ್ರಿಕೂಟದೊಂದಿಗೆ ಇಲ್ಲ ಎಂದು ನಾವು ಅಧಿಕೃತವಾಗಿ ಹೇಳಿದ್ದೇವೆ. ನಮ್ಮ ಮೈತ್ರಿ ಲೋಕಸಭಾ ಚುನಾವಣೆವರೆಗೂ ಮಾತ್ರ ಇತ್ತು. ಜುಲೈ 21 ರಿಂದ ಆಗಸ್ಟ್ 21 ರವರೆಗೆ ನಡೆಯಲಿರುವ ಸಂಸತ್ತಿನ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ದೆಹಲಿಯಲ್ಲಿ ಕೊಳೆಗೇರಿಗಳ ಧ್ವಂಸವನ್ನು ಎಎಪಿ ಪಕ್ಷವು ಎತ್ತಿ ತೋರಿಸುತ್ತದೆ ಎಂದು ಸಿಂಗ್ ಹೇಳಿದರು.
ಇಂದು ಮುಂಗಾರು ಅಧಿವೇಶನ ಹಿನ್ನೆಲೆ ಸಂಜೆ ಏಳು ಗಂಟೆಗೆ ಇಂಡಿಯಾ ಒಕ್ಕೂಟದ (INDIA Bloc) ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ಇಂಡಿಯಾ ಒಕ್ಕೂಟಕ್ಕೆ ಆಪ್ ಶಾಕ್ ಕೊಟ್ಟಿದೆ.